ನ್ಯಾಯ ವಿಳಂಬ: ಜಟಿಲ ಪ್ರಕ್ರಿಯೆ, ಕಠಿಣ ಮನಸ್ಥಿತಿ

0
24

ನ್ಯಾಯಾಲಯಕ್ಕೆ ಹೋದರೆ ನ್ಯಾಯ ಗಗನಕುಸುಮ, ಶೀಘ್ರ ಪರಿಹಾರ ಸಿಗುವುದು ವಿಳಂಬವಾಗುವುದು, ಹೀಗೆ ಸಾಮಾನ್ಯ ಮನುಷ್ಯ ಪೂರ್ವ ನಿರ್ಧಾರಕ್ಕೆ ಬಂದು ಬಿಡುತ್ತಾನೆ. “ಗೆದ್ದವನು ಸೋತ, ಸೋತವನು ಸತ್ತ” ಅನ್ನುವ ಆಡು ನುಡಿಯನ್ನು ಕೇಳಿರುತ್ತಾನೆ. ಸಮಯ, ಆಯುಷ್ಯ, ಹಣ ವ್ಯಯಿಸಿದವರನ್ನು ಕಂಡಿರುತ್ತಾನೆ.
ಸಿವಿಲ್ ವ್ಯಾಜ್ಯಗಳಲ್ಲಿ, ವಾದಿ ಪ್ರತಿವಾದಿಯರು ತಮ್ಮ ಹಕ್ಕನ್ನು ದಿವಾಣಿ ಪ್ರಕ್ರಿಯಾ ಸಂಹಿತೆ ಕಾನೂನು ಅನುಸಾರ, ಸಾಕ್ಷ್ಯಾಧಾರ ಕಾನೂನಿನಂತೆ ರುಜುವಾತುಪಡಿಸಬೇಕು. ಪ್ರತಿವಾದಿ, ಅವಶ್ಯಕ ಪಾರ್ಟಿಗಳಿಗೆ ಸಮನ್ಸ್ ನೋಟಿಸು ತಲುಪಬೇಕು. ಮಧ್ಯಂತರ ಅರ್ಜಿಗಳ ವಿಚಾರಣೆ, ಆದೇಶ, ಅವುಗಳ ಮೇಲೆ ಅಪೀಲು ತಡೆಯಾಜ್ಞೆ ಮುಗಿವವರೆಗೆ ಕಾಯಬೇಕು. ವಾದಿ ಪ್ರತಿವಾದಿ ಮುಖ್ಯ ವಿಚಾರಣೆ, ಪಾಟೀ ಸವಾಲುಗಳು, ವಾದ ಪ್ರತಿವಾದ ಮುಗಿದು ಅಂತಿಮ ತೀರ್ಪು ಪ್ರಕಟವಾಗುತ್ತದೆ. ತೀರ್ಪಿನ ನಂತರ ನೊಂದ ವ್ಯಕ್ತಿಯಿಂದ ಮೇಲನ್ಮವಿ ಸಲ್ಲಿಸಬಹುದು. ಮೇಲ್ಮನವಿ ವಿಚಾರಣೆ, ತೀರ್ಪು. ಅದರ ಮೇಲೆ ಮತ್ತೊಂದು ಮೇಲ್ಮನವಿ, ರಿವಿಜನ್, ರಿವಿವ್ ಹೀಗೆಲ್ಲ ಸಾಗಿ ಅಂತಿಮವಾಗಿ ಜಯಶಾಲಿ ಕೂಡ ಸೋತು ಸುಣ್ಣವಾಗಿ ಬಸವಳಿಯುತ್ತಾನೆ.
“ನೈಸರ್ಗಿಕ ನ್ಯಾಯ” (ನ್ಯಾಚುರಲ್ ಜಸ್ಟೀಸ್) ಇದೊಂದು ನ್ಯಾಯದಾನ ಪ್ರಕ್ರಿಯೆ ತತ್ವದ ಮೇಲೆ ನ್ಯಾಯ ನಿರ್ಣಯವಾಗುತ್ತದೆ. ಯಾವುದೇ ವ್ಯಕ್ತಿಯ ವಿರುದ್ಧ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರಿಗೆ ತಮ್ಮ ವಾದ ಮಂಡಿಸಲು ಮತ್ತು ತಮ್ಮ ವಿರುದ್ಧದ ಆರೋಪಗಳನ್ನು ಎದುರಿಸಲು ಅವಕಾಶ ನೀಡಬೇಕು. ಒಂದು ಸರಳವಾದ ಸಮಸ್ಯೆಯ ಪ್ರಕರಣವು ಹೀಗೆ ಎಲ್ಲಾ ಪ್ರಕ್ರಿಯೆಗಳ ಸುತ್ತ ಸುಳಿಯುತ್ತಾ ವರ್ಷಾನುಗಟ್ಟಲೆ ನಡೆದು ಕೊನೆಯಾಯಿತು.
ವಾದಿಯು ತನ್ನ 5 ಜನ ಸಹೋದರರ ಮೇಲೆ ತನ್ನ ಮನೆತನದ ಪಿತ್ರಾರ್ಜಿತ ಜಂಟಿ ಕುಟುಂಬದ ಆಸ್ತಿಯಲ್ಲಿ ಪಾಲು ಕೇಳಿ ಪಾಲು ವಿಭಜಿಸಿ ಪ್ರತ್ಯೇಕ ಸ್ವಾಧೀನ ಕೋರಿ ದಾವೆ ದಾಖಲಿಸುತ್ತಾನೆ. 1ನೆಯ ಪ್ರತಿವಾದಿ ಸಹೋದರನ ಪರವಾಗಿ ವಕಾಲತ್ತನ್ನು ದಾಖಲಿಸಿದೆನು. ಉಳಿದ 4 ಜನ ಸಹೋದರರು ಬೇರೆ ಬೇರೆ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಅವರಿಗೆಲ್ಲ ದಾವೆ ಸಮನ್ಸ್‌ಗಳು ಮುಟ್ಟುವುದು ಅತ್ಯವಶ್ಯಕ. 3ನೆಯ ಪ್ರತಿವಾದಿಗೆ ಕೋರ್ಟ್ ಸಮನ್ಸ್ ಜಾರಿ ಆಯಿತು. ಕೋರ್ಟಿಗೆ ಗೈರು ಹಾಜರಾದನು. ಅಷ್ಟರಲ್ಲಿ 4ನೆಯ ಪ್ರತಿವಾದಿ, ತನ್ನ ಹೆಂಡತಿ ಮತ್ತು 5 ಜನ ಮಕ್ಕಳು ವಾರಸುದಾರರನ್ನು ಬಿಟ್ಟು ಮೃತನಾದನು. ಬೇರೆ ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದ ವಾರಸುದಾರರ ವಿಳಾಸವನ್ನು ಪಡೆದುಕೊಂಡು ದಾವೆಯಲ್ಲಿ ಸೇರಿಸಿ ಸಮನ್ಸ್ ತಲುಪುವಷ್ಟರಲ್ಲಿ 2 ವರ್ಷ ಕಳೆದುಹೋಯಿತು. ಆ ವಾರಸುದಾರರಲ್ಲಿ ಒಬ್ಬನು ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಮೃತನಾದ. ಅವರಿಗೆ ಕೋರ್ಟ್ ಸಮನ್ಸ್ ಜಾರಿಯಾಗಲು ಮತ್ತಷ್ಟು ಸಮಯವಾಯಿತು. 5ನೆಯ ಪ್ರತಿವಾದಿಗೆ ಸಮನ್ಸ್ ತಲುಪಲಿಲ್ಲ. ಅವನು ವಾಸವಾಗಿದ್ದ ಜಿಲ್ಲೆಯಲ್ಲಿ ಪ್ರಸಾರವಾಗುವ ದಿನಪತ್ರಿಕೆಯಲ್ಲಿ ಕೋರ್ಟ್ ಆದೇ ಶದಂತೆ ಸಮನ್ಸ್ ಪ್ರಕಟಿಸಲಾಯಿತು. 5ನೆ ಪ್ರತಿವಾದಿ ನ್ಯಾಯಾಲಯಕ್ಕೆ ಹಾಜರಾದನು. ಹಾಜರಾದ ಪ್ರತಿವಾದಿಗಳು ತಮ್ಮ ಕೈಫಿಯತ್/ ಲಿಖಿತ ಹೇಳಿಕೆಯನ್ನು ಸಲ್ಲಿಸಿದರು. 3 ಮತ್ತು 5ನೆಯ ಪ್ರತಿವಾದಿಯರು ದಾವೆ ಆಸ್ತಿಗಳಲ್ಲಿ ಕೆಲವು ಆಸ್ತಿಗಳು ತಮ್ಮ ಸ್ವಯಾರ್ಜಿತ ಆಸ್ತಿ ಎಂದು ಪ್ರತಿಪಾದಿಸಿದರು.
ಇಷ್ಟೆಲ್ಲಾ ಪ್ರಕರಣವು ಮುಂದುವರಿದಾಗ ಸಾವಿನ ಸರಣಿ ಮುಂದುವರೆಯಿತು. ವಾದಿ 1, 3, 5ನೇ ಪ್ರತಿವಾದಿ ಮೃತರಾದರು. ಮೃತರ ವಾರಸುದಾರರಿಗೆ ಸಮನ್ಸ್, ನೋಟಿಸ್ ತಲುಪಿದವು. ಮತ್ತೆ ವಿಳಂಬವಾಯಿತು. ಪ್ರಕರಣ ಮುಂದುವರೆವಷ್ಟರಲ್ಲಿ 15 ವರ್ಷಗಳು ಕಳೆದುಹೋದವು. ಮಧ್ಯಂತರ ಅರ್ಜಿಗಳ ಮೇಲೆ ಆದೇಶಗಳಾದವು. ಅವುಗಳ ಮೇಲೆ ಜಿಲ್ಲಾ, ಉಚ್ಚ ನ್ಯಾಯಾಲಯಗಳಲ್ಲಿ ಮೇಲ್ಮನವಿಗಳಾದವು. ಮುಖ್ಯ ವಿಚಾರಣೆ ಪಾಟಿ ಸವಾಲು, ವಾದ ಪ್ರತಿವಾದ ನಡೆದವು. ವಾದಿ ಪ್ರತಿವಾದಿಯರಿಗೆ ದಾವೆ ಆಸ್ತಿಯಲ್ಲಿ ಸಮನಾದ ಪಾಲು ಎಂದು ಪ್ರಾರ್ಥಮಿಕ ತೀರ್ಪು ಪ್ರಕಟವಾದಾಗ ಪ್ರಕರಣ 18 ವರ್ಷಗಳಷ್ಟು ಹಳೆಯದಾಗಿತ್ತು.
ತೀರ್ಪನ್ನು ಪ್ರಶ್ನಿಸಿ 3, 5ನೇ ಪ್ರತಿವಾದಿಯರ ವಾರಸುದಾರರು, ಕೆಲವು ಆಸ್ತಿಗಳು ಸ್ವಯಾರ್ಜಿತ ಆಸ್ತಿ ಎಂದು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ಉಚ್ಚ ನ್ಯಾಯಾಲಯದಲ್ಲಿ, ಕೆಳ ನ್ಯಾಯಾಲಯದ ತೀರ್ಪು ಸರಿ ಇದೆ ಎಂದು ಮೇಲ್ಮನವಿ ವಜಾಗೊಳಿಸಿ ಆದೇಶ ಆಗುವಷ್ಟರಲ್ಲಿ ನಾಲ್ಕು ವರ್ಷ ಕಳೆದುಹೋದವು.
ಕೊನೆಯ ಪ್ರಕ್ರಿಯೆ, ಜಮೀನುಗಳನ್ನು ಪ್ರತ್ಯಕ್ಷವಾಗಿ ವಿಭಜಿಸಿಕೊಡಲು ಅಂತಿಮ ಡಿಗ್ರಿ ಪ್ರಕ್ರಿಯೆ (ಎಫ್.ಡಿ.ಪಿ) ಪ್ರಾರಂಭವಾಯಿತು. ತಹಶೀಲದಾರ್ ಸರ್ವೆ ಅಧಿಕಾರಿ ಮೂಲಕ ಜಮೀನು ಅಳತೆ ಮಾಡಿ ಹಿಸ್ಸೆ ನಕಾಶೆ ತಯಾರಿಸಿ ಕೋರ್ಟಿಗೆ ವರದಿ ಸಲ್ಲಿಸಿದ. ಫೈನಲ್ ಡಿಕ್ರಿ ಆದೇಶವಾಯಿತು. ಅದನ್ನು ಪ್ರಶ್ನಿಸಿ ಕೆಲವರು ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಮೇಲನ್ಮವಿ ವಜಾಗೊಂಡಿತು. ಅಂತಿಮವಾಗಿ ಕೋರ್ಟ್ ವಾದಿ ಪ್ರತಿವಾದಿಯರಿಗೆ ಹಿಸ್ಸೆಯನ್ನು, ಸ್ವಾಧೀನ ವಾರೆಂಟ್ ಜಾರಿ ಮಾಡಿ ಬೆಲೀಫ್ ಮುಖಾಂತರ ಸ್ವಾಧೀನ ಕೊಡಿಸಿತು. ಪ್ರಕರಣ ಕೊನೆಗಾಣಲು 34 ವರ್ಷಗಳು ಗತಿಸಿದವು.
ಪ್ರಕರಣ ವಿಳಂಬವಾಗಲು, ಜನರು ಕೋರ್ಟ್ ಮೇಲೆ ವಿಶ್ವಾಸವಿಟ್ಟು ದಾಖಲಿಸುವ ಪ್ರಕರಣಗಳು, ಸಮಯಾಭಾವದಿಂದ ಬಾಕಿ ಉಳಿವಿಕೆ ಅಲ್ಲದೆ ಜಟಿಲವಾದ ಪ್ರಕ್ರಿಯೆ ಕಾರಣವಾಗುತ್ತವೆ. ಒಟ್ಟಾಗಿ ಕುಳಿತು ನಿರ್ಣಯಿಕೊಳ್ಳಬಹುದಾದ ಸಮಸ್ಯೆಗಳನ್ನು, ಕೋರ್ಟಿಗೆ ಹೋಗುವ ಕಕ್ಷಿದಾರರ ತಂಟೆಕೋರ ಮನಸ್ಥಿತಿಯು ಕೂಡ ಕಾರಣವಾಗದೆ ಇರಲಾರದು.

Previous articleಬ್ರಿಕ್ಸ್: ಭಾರತದ ಸಮತೋಲನದ ನಡೆ
Next articleTamil Nadu: ಇಂಧನ ಸಾಗಿಸುತ್ತಿದ್ದ ರೈಲಿನಲ್ಲಿ ಬೆಂಕಿ: 8 ರೈಲುಗಳ ಸಂಚಾರ ಸ್ಥಗಿತ