ಕಾರವಾರ : ಆಸ್ಪತ್ರೆಗೆ ಹಾಸಿಗೆ ಸಪ್ಲೈ ಮಾಡುವ ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ವೇಳೆ ಕಾರವಾರ ಮೆಡಿಕಲ್ ಕಾಲೇಜು ಅಧೀನ ಜಿಲ್ಲಾ ಆಸ್ಪತ್ರೆಯ ಆಡಳಿತಾಧಿಕಾರಿ, ಹೆರಿಗೆ ಡಾಕ್ಟರ್ ಶಿವಾನಂದ ಕುಡ್ತಲಕರ್ ಗುರುವಾರ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ನಡೆದಿದೆ.
ಕಾರವಾರ ಲೋಕಾಯುಕ್ತರ ಬಲೆಗೆ ಬಿದ್ದಿರುವ ಶಿವಾನಂದ ಕುಡ್ತಲಕರ್ ಗುತ್ತಿಗೆದಾರರೊಬ್ಬರ ಬಳಿ 50,000 ರೂಪಾಯಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆಸ್ಪತ್ರೆಯ ರೋಗಿಗಳ ಹಾಸಿಗೆ ಟೆಂಡರ್ 3.5 ಲಕ್ಷದ ಬಿಲ್ ಪಾವತಿಸಲು 75000 ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ನಿನ್ನೆ 20000 ಲಂಚ ಪಡೆದಿದ್ದರು. ಇಂದು 30 ಸಾವಿರ ಲಂಚದ (ಕಮಿಷನ್) ಹಣ ಪಡೆಯುವಾಗ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ ಹಾಗೂ ತಂಡ ದಾಳಿ ಮಾಡಿ ಕುಡ್ತಲಕರ್ ಅವರನ್ನು ಹಿಡಿದಿದ್ದಾರೆ.
ಅಂಕೋಲಾ ಮೂಲದ ಗುತ್ತಿಗೆದಾರ ಮೌಸೀನ್ ಅಹ್ಮದ್ ಶೇಖ್ ಎಂಬುವವರು ಲೋಕಾಯುಕ್ತಕ್ಕೆ ಈ ಸಂಬಂಧ ದೂರು ನೀಡಿದ್ದರು. ನಿನ್ನೆ ರಾತ್ರಿ 20 ಸಾವಿರ ಹಣ ನೀಡಲಾಗಿತ್ತು. ಇಂದು 30 ಸಾವಿರ ರೂಪಾಯಿ ಕೇಳಿದ್ದು, ಈ ವೇಳೆ ವೈದ್ಯನ ಕಾಟ ತಾಳಲಾರದೆ, ಉಳಿದ 30 ಸಾವಿರ ರೂಪಾಯಿ ಹಣವನ್ನು ಭ್ರಷ್ಟ ವೈದ್ಯ , ಕುಡ್ತಲಕರ್‌ಗೆ ನೀಡಿದರು. ಲಂಚದ ಹಣ ಸ್ವಿಕರಿಸುವಾಗ ರೆಡ್ ಹ್ಯಾಂಡ್ ಆಗಿ ಡಾ. ಶಿವಾನಂದ ಕುಡಲ್ತಕರ್ ಸಿಕ್ಕಿಬಿದ್ದಿದ್ದಾರೆ. ಕಾರವಾರ ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯ್ಕ್ ನೇತೃತ್ವದಲ್ಲಿ, ಅವರ ಸಿಬ್ಬಂದಿ ಈ ದಾಳಿ ನಡೆಸಿದರು, ಪ್ರಕರಣ ದಾಖಲಿಸುವ ಪ್ರಕ್ರಿಯೆ ಮುಂದುವರಿದಿದೆ.