SN Subba Reddy: ಸಿಎಂ, ಡಿಸಿಎಂ ದೆಹಲಿಯಲ್ಲಿ: ಬೆಂಗಳೂರಲ್ಲಿ ಕಾಂಗ್ರೆಸ್‌ ಶಾಸಕನ ಮನೆ ಮೇಲೆ ಇಡಿ ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ದೆಹಲಿ ಪ್ರವಾಸದಲ್ಲಿದ್ದಾರೆ. ಇಂತಹ ಸಮಯದಲ್ಲಿಯೇ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಶಾಸಕ, ಅವರ ಸಂಬಂಧಿಕರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆದಿದೆ. ಇದು ರಾಜ್ಯ ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಗುರುವಾರ ಬೆಳಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ ಅವರ ಬೆಂಗಳೂರಿನ ನಿವಾಸ, ಅವರ ಸಂಬಂಧಿಕರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ 5 ಕಡೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಶಾಸಕ ಸುಬ್ಬಾರೆಡ್ಡಿ ಮತ್ತು ಕುಟುಂಬ ಸದಸ್ಯರು ಹೊಂದಿರುವ ವಿದೇಶಿ ಆಸ್ತಿ ಮತ್ತು ಅವರ ಉದ್ಯಮ ಪಾಲುದಾರರಿಗೆ ಸೇರಿದ ಆಸ್ತಿಗಳ ವಿಷಯವಾಗಿ ದಾಳಿ ನಡೆದಿದೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ.

ವಿದೇಶಗಳಲ್ಲಿನ ಬ್ಯಾಂಕ್​ ಅಕೌಂಟ್​​, ವಿದೇಶಗಳಲ್ಲಿನ ವ್ಯವಹಾರದಲ್ಲಿ ಹೂಡಿಕೆ ವಿಚಾರವಾಗಿ ಶೋಧ ಕಾರ್ಯವನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಸುಬ್ಬಾರೆಡ್ಡಿ ಅವರು ಮಲೇಷ್ಯಾ, ಹಾಂಕಾಂಗ್​​, ಜರ್ಮನಿಯಲ್ಲಿ ಆಸ್ತಿ ಹೊಂದಿದ್ದಾರೆ ಎಂಬ ಆರೋಪವಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಈ ದಾಳಿ ನಡೆದಿದೆ ಎಂಬ ಮಾಹಿತಿ ಇದ್ದು, ಇಡಿ ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ಶಾಸಕ ಸುಬ್ಬಾರೆಡ್ಡಿ ಮತ್ತು ಸಂಬಂಧಿಕರಿಗೆ ಸೇರಿದ ಮನೆಗಳಲ್ಲಿ ಶೋಧ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ.

ಸುಬ್ಬಾರೆಡ್ಡಿ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗೇಪಲ್ಲಿ ಕ್ಷೇತ್ರದಲ್ಲಿ 82,128 ಮತಗಳನ್ನು ಪಡೆದು ಬಿಜೆಪಿಯ ಸಿ. ಮುನಿರಾಜು (62,949 ಮತಗಳು) ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಇಡಿ ಕೇಂದ್ರ ಸರ್ಕಾರದ ಕೈಗೊಂಬೆ. ಅದು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಿ ದಾಳಿ ಮಾಡುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಆರೋಪ. ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ಆಡಳಿತ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ಮನೆ ಮೇಲೆ ಇಡಿ ದಾಳಿ ಮಾಡಿದೆ.

ಇಡಿ ದಾಳಿಯ ಕುರಿತು ಶಾಸಕ ಸುಬ್ಬಾರೆಡ್ಡಿಯಾಗಲಿ ಅಥವ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರಾಗಲಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಇಡಿ ಸಾಮಾಜಿಕ ಜಾಲತಾಣದ ಮೂಲಕ ದಾಳಿಯ ಕುರಿತು ಮಾಹಿತಿ ನೀಡುತ್ತದೆ.

2024ರ ಡಿಸೆಂಬರ್‌ನಲ್ಲಿ ಸಚಿವ ಸಂಪುಟ ಪುನರ್ ರಚನೆಯ ಚರ್ಚೆಗಳು ನಡೆದಿದ್ದಾಗ ಶಾಸಕ ಎಸ್. ಎನ್. ಸುಬ್ಬಾರೆಡ್ಡಿ, “ನನಗೆ ಸಚಿವ ಸ್ಥಾನ ಬೇಕೆ ಬೇಕು” ಎಂದು ಹೇಳಿದ್ದರು.

ಚಿಂತಾಮಣಿ ಶಾಸಕ ಡಾ. ಎಂ. ಸಿ. ಸುಧಾಕರ್ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರು. ಚಿಕ್ಕಬಳ್ಳಾಪುರದಿಂದ ಮೊದಲು ಇಬ್ಬರ ಹೆಸರು ಸಹ ಸಚಿವ ಸ್ಥಾನಕ್ಕೆ ಕೇಳಿ ಬಂದಿತ್ತು. ಸುಧಾಕರ್ ಸಚಿವರಾಗಿದ್ದರು.

ಸಚಿವ ಸ್ಥಾನಕ್ಕಾಗಿ ದೆಹಲಿಗೆ ಹೋಗಿ ಲಾಬಿ ಮಾಡದ ಕಾರಣ ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ಕೈತಪ್ಪಿತು ಎಂಬ ಮಾತು ಕೇಳಿ ಬಂದಿತ್ತು. ಅವರಿಗೆ ಸರ್ಕಾರ ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ಸ್ಥಾನವನ್ನು ನೀಡಿತ್ತು. ಆದರೆ ಅದನ್ನು ತಿರಸ್ಕರಿಸಿದ್ದ ಅವರು, ನೀಡುವುದಾದರೆ ಸಚಿವ ಸ್ಥಾನ ನೀಡಿ. ಇಲ್ಲವೇ ಯಾವುದೇ ಹುದ್ದೆ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದರು.