ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಅಮಾನತು

ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪದಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರ ಆತ್ಮಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಪ್ರಾಂಶುಪಾಲರನ್ನು ಅಮಾನತು ಮಾಡಲಾಗಿದೆ.
ಪ್ರಾಂಶುಪಾಲ ರಜಿನಿ ಮತ್ತು ನಿಲಯ ಪಾಲಕ (ಪ್ರಭಾರ) ಸುಂದರ ನಾಯ್ಕ ಅವರನ್ನು ಅಮಾನತು ಮಾಡಿ ಮತ್ತೊಂದು ಆದೇಶವನ್ನು ಕಾಂತರಾಜು ಪಿ.ಎಸ್. ಹೊರಡಿಸಿದ್ದಾರೆ. ಇಬ್ಬರ ಕರ್ತವ್ಯ ಲೋಪ ಮತ್ತು ನಿರ್ಲಕ್ಷತೆಯಿಂದ ವಿದ್ಯಾರ್ಥಿನಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಆತ್ಮಹತ್ಯೆ ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಭೆ ಇತ್ತೀಚೆಗೆ ನಡೆದು ತೆಗೆದುಕೊಂಡ ನಿರ್ಧಾರದ ಆಧಾರದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶೋಭಎಸ್, ಇವರನ್ನು ತನಿಖಾಧಿಕಾರಿಯನ್ನಾಗಿ ಹಾಗೂ ಜಿಲ್ಲಾ ಸಮನ್ವಯಾಧಿಕಾರಿ ಕೆ.ಪಿ.ಶೈಲಾ ಇವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಹರಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಮಿತ ಎಸ್, ಜೂನ್ ೨೮ ರಂದು ವಸತಿ ಶಾಲೆಯ ಸ್ನಾನ ಗೃಹದಲ್ಲಿ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಳು. ಇದಕ್ಕೂ ಮೊದಲು ಇದೆ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ೯ನೇ ತರಗತಿಯ ಅಮೂಲ್ಯ ಎನ್. ಎಮ್. ವಸತಿ ಶಾಲೆಯಲ್ಲಿ ನೇಣು ಬೀಗಿದುಕೊಂಡು ಮೃತಪಟ್ಟಿದ್ದಳು. ಮೇಲ್ಕಂಡ ಎರಡೂ ಪ್ರಕರಣಗಳ ಕುರಿತು ತನಿಖೆ ನಡೆಸಿ ವರದಿ ಪಡೆಯಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಲಾಗಿದೆ.
ಎರಡೂ ಪ್ರಕರಣದ ಬಗ್ಗೆ ವ್ಯಾಪಕ ಸಂಶಯ ವ್ಯಕ್ತಪಡಿಸಿದ್ದ ಸಾರ್ವಜನಿಕರು/ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿ ತನಿಖೆಗೆ ಒತ್ತಾಯಿಸಿದ್ದರು. ಘಟನೆಗೆ ವಸತಿ ಶಾಲೆಯ ಸಿಬ್ಬಂದಿ ವರ್ಗವೇ ಕಾರಣ ಎನ್ನುವ ಆರೋಪ ವ್ಯಕ್ತವಾಗಿತ್ತು. ತನಿಖೆಯಿಂದ ಆರೋಪ ಸಾಬೀತು ಆದಲ್ಲಿ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೂ ಸ್ಥಳೀಯ ಅಧಿಕಾರಿಗಳು ನಡೆಸುವ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿ ಸಿಬ್ಬಂದಿ ಅಮಾನತು ಮಾಡಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ತೀವ್ರಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.