ಗುಜರಾತ್‌: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು: 9 ಮಂದಿ ಸಾವು

ಗುಜರಾತ್‌: ವಡೋದರಾದ ಪದ್ರಾ ತಾಲೂಕಿನ ಮುಜ್ಪುರ ಬಳಿ ಗಂಭೀರ ಸೇತುವೆ ಕುಸಿದು ಐದು ವಾಹನಗಳು ಮಹಿಸಾಗರ್‌ ನದಿಗೆ ಬಿದ್ದ ಘಟನೆ ನಡೆದಿದೆ. ಕನಿಷ್ಠ 9 ಮಂದಿ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ 7:45 ರ ಸುಮಾರಿಗೆ ಈ ಸೇತುವೆ ಕುಸಿದಿದೆ, ಸಾಮಾಜಿಕ ಜಾಲತಾಣದಲ್ಲಿ ಸೇತುವೆಯಡಿ ಲಾರಿ ಸಿಲುಕಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ, ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಗಂಭೀರಾ ಸೇತುವೆಯ ಒಂದು ಭಾಗ ಕುಸಿಯಿತು. ಆ ವೇಳೆ ಸೇತುವೆಯ ಮೇಲೆ ಸಂಚರಿಸುತ್ತಿದ್ದ ಟ್ರಕ್, ವ್ಯಾನ್ ಮತ್ತು ಕಾರುಗಳು ನದಿಗೆ ಉರುಳಿ ಬಿದ್ದವು ಎಂದು ತಿಳಿದುಬಂದಿದೆ.
45 ವರ್ಷದ ಹಳೆಯ ಸೇತುವೆ ಇದಾಗಿದ್ದು ಬಹಳ ಹಿಂದಿನಿಂದಲೂ ಅಪಾಯಕಾರಿ ಸ್ಥಿತಿಯಲ್ಲಿತ್ತು. ಅದರ ಶಿಥಿಲಾವಸ್ಥೆಯ ಬಗ್ಗೆ ಸ್ಥಳೀಯರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರು. ತುರ್ತು ದುರಸ್ತಿ ಅಥವಾ ಹೊಸ ರಚನೆಗಾಗಿ ಮನವಿ ಮಾಡಿದ್ದರು ಎನ್ನಲಾಗಿದೆ, ಸೇತುವೆಯ ಕುಸಿತವಾದಗ ತಕ್ಷಣ ಸ್ಥಳೀಯರು ಮತ್ತು ತುರ್ತು ಸೇವಾ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದು, ಮೃತದೇಹಗಳನ್ನು ಹೊರತೆಗೆದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ವಡೋದರಾ ಹಾಗೂ ಆನಂದ್ ಜಿಲ್ಲೆಗಳ ಅಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಮಟ್ಟದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಸೇತುವೆ ಕುಸಿತದಿಂದಾಗಿ ಭಾರೀ ವಾಹನಗಳೊಂದಿಗೆ ಜನರು ನದಿಗೆ ಉರುಳಿದ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡಗಳು, ಪೊಲೀಸ್ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಜಮಾವಣೆಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಈ ಸೇತುವೆ ಮಧ್ಯ ಗುಜರಾತ್ ಹಾಗೂ ಸೌರಾಷ್ಟ್ರವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದ್ದು, ವಡೋದರಾ ನಗರದಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಸೇತುವೆ ಕುಸಿತದಿಂದಾಗಿ ಈ ಮಾರ್ಗದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.