12ನೇ ತರಗತಿ ಓದಿ ಸಾವಿರಾರು ಕೋಟಿ ಆಸ್ತಿ ಮಾಡ್ಕೊಂಡ್ರಿ…

ದಾವಣಗೆರೆ: ಬುದ್ಧ, ಸಿದ್ಧಾರ್ಥ ಅಂತೆಲ್ಲಾ ಟ್ರಸ್ಟ್‌ಗಳನ್ನು ಮಾಡಿಕೊಂಡು, ನೀವೇ ಕೆಐಎಡಿಬಿ ಭೂಮಿಯನ್ನೆಲ್ಲಾ ಹೊಡೆಯಬೇಡಿ ಸರ್, ಕಂಪನಿಗಳಿಗೆ ಕೆಐಎಡಿಬಿ ಭೂಮಿ ಕೊಡಿಸಿ, ವಿದ್ಯಾವಂತ ಯುವಕರಿಗೆ ಕೆಲಸ ಸಿಗುವಂತೆ ಮಾಡಿ ಪ್ರಿಯಾಂಕ್ ಖರ್ಗೆ ಸರ್ ಎಂದು ಮೈಸೂರು ಮಾಜಿ ಸಂಸದ ಪ್ರತಾಪ ಸಿಂಹ ವ್ಯಂಗಭರಿತವಾಗಿ ಕಟುಕಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಸರ್, ನಿಮ್ಮ ರೀತಿಯ ಅದೃಷ್ಟವಂತರು ಯಾರೂ ಇರೊಲ್ಲ. ಹತ್ತು, ಹನ್ನೆರಡನೇ ತರಗತಿಯನ್ನಷ್ಟೇ ಓದಿ, ಸಾವಿರಾರು ಕೋಟಿ ಆಸ್ತಿ, ಒಂದೇ ನೋಂದಣಿ ಸಂಖ್ಯೆಯಲ್ಲಿ ಹತ್ತಾರು ಐಷಾರಾಮಿ ಆಸ್ತಿ ಖರೀದಿಸುವ ಶಕ್ತಿಯೂ ಎಲ್ಲರಿಗೂ ಸಿಗೊಲ್ಲ ಎಂದರು.
ಬಡವರಿಗೂ ಬದುಕಲು ಒಂದಿಷ್ಟು ದಾರಿ ಮಾಡಿಕೊಡಿ ಸರ್. ನನ್ನನ್ನು ಬೇಕಾದರೆ ದಿನಾಲೂ ಬೈಯ್ರಿ. ನಮ್ಮ ಹುಡುಗರಿಗೆ ಕೆಲಸ ಕೊಡಿ ಸರ್. ಪ್ರಿಯಾಂಕ ಖರ್ಗೆ ಸಾಹೇಬ್ರೆ ನೀವು ನನ್ನನ್ನು ಯಾವುದೇ ಪ್ರಾಣಿಗೆ ಹೋಲಿಸಿಕೊಳ್ಳಿ. ನಿಮ್ಮ ಪದಕೋಶದಲ್ಲಿದ್ದಷ್ಟು ಪದಗಳನ್ನು ಬಳಸಿಕೊಂಡು, ನನ್ನು ಬೈಯ್ಯಿರಿ. ಆದರೆ, ನಮ್ಮ ವಿದ್ಯಾವಂತ ಯುವಜನರಿಗೆ ಉದ್ಯೋಗವನ್ನು ಮೊದಲು ಕೊಡಿಸಿ ಸರ್ ಎಂದು ವ್ಯಂಗ್ಯವಾಡಿದರು.
ಪ್ರತಿನಿತ್ಯ ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ನೀವು ಮಾತನಾಡುತ್ತೀರಿ. ಪ್ರತಾಪ ಸಿಂಹನಿಗೂ ಬೈಯ್ಯಿರಿ. ನನ್ನನ್ನು ಬೇಕಾದರೆ ನಿಂದಿಸಿ. ಇಲಾಖೆ ಏಜೆನ್ಸಿಗಳನ್ನು ಮಾಡಿದ್ದೀರಿ. ನನ್ನನ್ನು ಬೈದರೆ ನಿಮಗೆ ಅಷ್ಟೊಂದು ಖುಷಿ ಸಿಗುತ್ತದೆಂದರೆ ಅದಕ್ಕೂ ನಾನು ಕಲ್ಲು ಹಾಕುವುದಿಲ್ಲ. ಸರ್ ನಿರುದ್ಯೋಗ ಭತ್ಯೆ ಕೊಡುತ್ತೇವೆ ಅಂತಲೇ ಅಧಿಕಾರಕ್ಕೆ ಬಂದಿದ್ದೀರಿ. ಎರಡು ವರ್ಷವಾದರೂ ಯುವನಿಧಿ ಜಾರಿಯಾಗಲಿಲ್ಲ. ಯಾರಿಗೂ ಯುವನಿಧಿ ಭತ್ಯೆ ಬರುತ್ತಿಲ್ಲವಲ್ಲ ಎಂದು ಹೇಳಿದರು.
ಪ್ರತಿವರ್ಷ ಸುಮಾರು 1.5 ಲಕ್ಷದಷ್ಟು ಇಂಜಿನಿಯರಿಂಗ್ ಪದವೀಧರರು ಬರುತ್ತಿದ್ದಾರೆ. ಇಂಜಿನಿಯರಿಂಗ್ ಮುಗಿಸಿದವರಿಗೂ ಈಗ ಬಿಎ ಕಲಿತವರ ಪರಿಸ್ಥಿತಿಯೇ ಬಂದಿದೆ. ಸರ್ ನಿಮ್ಮ ಇಲಾಖೆಯ ಬಗ್ಗೆಯೂ ಒಂದಿಷ್ಟು ಮಾತನಾಡಿ. ನಿಮ್ಮ ಇಲಾಖೆಯಲ್ಲಿ ನಿಮ್ಮ ಸಾಧನೆಯ ಕುರಿತು ಸಹ ಒಂದಿಷ್ಟು ಮಾತನಾಡಿ ಸರ್, ಆದರೂ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ ಬಿಡಿ ಎಂದರು.