ಚಿಕ್ಕೋಡಿ: ಮಗ, ಸೊಸೆ ಕಾಟದಿಂದ ಮನನೊಂದು ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೃದ್ಧನೋರ್ವನನ್ನು ಸ್ಥಳೀಯರು ಕಾಪಾಡಿರುವ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಬಳಿ ಕೃಷ್ಣಾ ನದಿ ಸೇತುವೆ ಬಳಿ ನಡೆದಿದೆ.
ವೃದ್ಧನನ್ನು ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ (77) ಎಂದು ಗುರುತಿಸಲಾಗಿದೆ. ಈತ ಮೂಲತಃ ಯಮಕನಮರಡಿ ಗ್ರಾಮದವ. ಅಂಕಲಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಲು ಯತ್ನಿಸುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಅಲ್ಲಿಗೆ ಓಡಿದ ಸಾರ್ವಜನಿಕರು ಆತನ ರಕ್ಷಣೆ ಮಾಡಿದ್ದಾರೆ. ‘ನೀವು ನನಗೆ ಏನೂ ಕೇಳಬ್ಯಾಡ್ರಿ.. ನಾನು ಹೋಗ್ತೇನ್ರಿ.. ಜೀವ ಬ್ಯಾಡ ಆಗಿದೆ.. ನನ್ನ ಮುಟ್ಟಬ್ಯಾಡ್ರಿ.. ನಂಗ ನಡಿಯಾಕ ಬರಲ್ರಿ.. ನಂಗ ಜೀವನ ಬ್ಯಾಸರ ಆಗಿದೇರಿ.. ನೀವು ಹೋಗ್ರಿ.. ನನ್ನ ಇಲ್ಲೇ ಬಿಡ್ರಿ.. ಮಗ ಸೊಸೆ ಹಿಂಸೆ ನೀಡ್ತಾರ, ಮಗಳು ಮನೆಗೆ ಬರಬೇಡ ಅಂದಾಳ..’ ಎಂದು ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ ಹೇಳಿದ್ದಾನೆ. ಸಾರ್ವಜನಿಕರು ವಿಚಾರಿಸಿದಾಗ ಮಗ ಮತ್ತು ಸೊಸೆಯಿಂದ ಚಿತ್ರಹಿಂಸೆ ಅನುಭವಿಸಿದ ಕತೆಯನ್ನು ಹೇಳಿದ್ದಾನೆ. ‘ಮಗ-ಸೊಸೆ ಮಾನಸಿಕ ಹಿಂಸೆ ನೀಡಿದರು. ಮಗಳು ಕೂಡ ಮನೆಗೆ ಬರಬೇಡ ಅಂದುಬಿಟ್ಟಳು. ಇನ್ನು, ನನಗೆ ಯಾರು ಗತಿ? ಹೀಗಾಗಿ ದುಡುಕಿನ ನಿರ್ಧಾರಕ್ಕೆ ಮುಂದಾಗಿದ್ದೆ’ ಎಂದು ಕಣ್ಣೀರು ಇಟ್ಟಿದ್ದಾನೆ.
ನಂತರ ಸ್ಥಳೀಯರು ಅಂಕಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೃದ್ಧನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.