Jog Falls: ಜೋಗ ಟೂರ್ ಪ್ಯಾಕೇಜ್, ದರ ಮಾರ್ಗದ ವಿವರ

ಹಾವೇರಿ: ಮಲೆನಾಡಿನಲ್ಲಿ ನೈಋತ್ಯ ಮುಂಗಾರು ಮಳೆಯ ಆರ್ಭಟ ಹೆಚ್ಚಾಗಿದೆ. ಹಳ್ಳ, ನದಿಗಳು ತುಂಬಿ ಹರಿಯುತ್ತಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಜೋಗ ಜಲಪಾತ ನೋಡಲು ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಜೋಗಕ್ಕೆ ಸಂಚಾರ ನಡೆಸುವ ಪ್ರವಾಸಿಗರ ಅನುಕೂಲಕ್ಕಾಗಿ ವಿಶೇಷ ಟೂರ್ ಪ್ಯಾಕೇಜ್‌ ವ್ಯವಸ್ಥೆ ಮಾಡಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗ ಹಾವೇರಿ ಜಿಲ್ಲೆಯಿಂದ ಜೋಗ ಜಲಪಾತ ನೋಡಲು ಹೋಗುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ವಿಶೇಷ ಟೂರ್ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿದೆ. ಪ್ರವಾಸಿಗರು ಈ ಪ್ಯಾಕೇಜ್‌ಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಪ್ರತಿ ಭಾನುವಾರ ಮತ್ತು ರಜೆದಿನಗಳಂದು ಈ ಜೋಗ ಪ್ರವಾಸಿ ಟೂರ್ ಪ್ಯಾಕೇಜ್ ಲಭ್ಯವಿದೆ. 13/7/2025ರಿಂದ ಈ ಪ್ರವಾಸಿ ಟೂರ್ ಪ್ಯಾಕೇಜ್‌ ಪ್ರಾರಂಭವಾಗಲಿದೆ. ವೇಗದೂತ ಸಾರಿಗೆಯನ್ನು ಈ ಪ್ಯಾಕೇಜ್‌ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಹಾವೇರಿ-ಜೋಗ ಪ್ಯಾಕೇಜ್: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗ ಹಾವೇರಿ-ಜೋಗ ಫಾಲ್ಸ್ ಟೂರ್‌ ಪ್ಯಾಕೇಜ್‌ ಅನ್ನು ದಿನಾಂಕ 13/07/2025 ರಿಂದ ಪ್ರಾರಂಭಿಸಲಿದೆ. ಇದು ವಿಶೇಷ ಬಸ್ ಆದ ಕಾರಣ ‘ಶಕ್ತಿ’ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರತಿ ಭಾನುವಾರ ಮತ್ತು ರಜಾ ದಿನಗಳಂದು ಹಾವೇರಿ, ರಾಣೆಬೆನ್ನೂರು ಇಂದ ಈ ಪ್ರವಾಸಿ ಪ್ಯಾಕೇಜ್ ಬಸ್ ಹೊರಡಲಿದೆ. ಹಾವೇರಿಯನ್ನು 8 ಗಂಟೆಗೆ ಬಿಡುವ ಬಸ್ ಜೋಗ ಫಾಲ್ಸ್‌ ಅನ್ನು 12 ಗಂಟೆಗೆ ತಲುಪಲಿದೆ. ಜೋಗ ಫಾಲ್ಸ್‌ನಿಂದ 16:00ಕ್ಕೆ ಹೊರಡುವ ಬಸ್, ಹಾವೇರಿಗೆ 19:30ಕ್ಕೆ ತಲುಪಲಿದೆ.

ಈ ಪ್ರವಾಸಿ ಪ್ಯಾಕೇಜ್ ಬಸ್‌ ಪ್ರಯಾಣ ದರ 390 ರೂ. (ಹೋಗಿ ಬರುವ ಸೇರಿ) ಆಗಿದೆ. ಬಸ್ ಶಿರಸಿ, ಸಿದ್ದಾಪುರ ಮಾರ್ಗವಾಗಿ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ದರ್ಶನ ಮಾಡಿಸಿಕೊಂಡು ಜೋಗ ಫಾಲ್ಸ್‌ಗೆ ಸಂಚಾರವನ್ನು ನಡೆಸುತ್ತದೆ.

ರಾಣೇಬೆನ್ನೂರು-ಜೋಗ: ಈ ಪ್ರವಾಸಿ ಪ್ಯಾಕೇಜ್ ಸಹ ಜುಲೈ 13ರಿಂದ ಆರಂಭವಾಗಲಿದೆ. ಪ್ರತಿ ಭಾನವಾರ ಮತ್ತು ರಜಾ ದಿನಗಳು ಈ ಪ್ಯಾಕೇಜ್ ಲಭ್ಯವಿದೆ. ಈ ಪ್ರವಾಸಿ ಪ್ಯಾಕೇಜ್ ಬಸ್ ರಾಣೇಬೆನ್ನೂರಿನಿಂದ 8 ಗಂಟೆಗೆ ಹೊರಟು ಜೋಗ ಫಾಲ್ಸ್‌ಗೆ 11.30ಕ್ಕೆ ತಲುಪಲಿದೆ. ಜೋಗದಿಂದ 16:00 ಗಂಟೆಗೆ ಹೊರಟು ರಾಣೇಬೆನ್ನೂರಿಗೆ 19:30ಕ್ಕೆ ತಲುಪಲಿದೆ.

ಈ ಪ್ರವಾಸಿ ಪ್ಯಾಕೇಜ್‌ ದರ 370 ರೂ. (ಹೋಗಿ ಬರುವ ಸೇರಿ) ಎಂದು ನಿಗದಿ ಮಾಡಲಾಗಿದೆ. ಈ ಬಸ್‌ ಹಿರೆಕೇರೂರು, ಶಿರಾಳಕೊಪ್ಪ, ಸೊರಬ, ಸಿದ್ದಾಪುರ ಮಾರ್ಗವಾಗಿ ಸಂಚಾರವನ್ನು ನಡೆಸಲಿದೆ. ‘ಶಕ್ತಿ’ ಯೋಜನೆಯಡಿ ಈ ಪ್ರವಾಸಿ ಪ್ಯಾಕೇಜ್‌ಗೆ ಉಚಿತ ಪ್ರಯಾಣ ಸೌಲಭ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪ್ರವಾಸಿ ಪ್ಯಾಕೇಜ್‌ ಕುರಿತು ಹೆಚ್ಚಿನ ಮಾಹಿತಿಗಾಗಿ 7760991927 ಸಂಖ್ಯೆಗೆ ಕರೆ ಮಾಡಬಹುದು. ಇಲ್ಲವೇ ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಲು www.ksrtc.in ವೆಬ್‌ ಸೈಟ್‌ಗೆ ಭೇಟಿ ನೀಡಬಹುದು.