ಹೃದಯಾಘಾತ: ಇಬ್ಬರು ಸಾವು

ಸಿಂಧನೂರು/ದಾವಣಗೆರೆ: ಆಟೋದಲ್ಲಿ ಕುಳಿತಿದ್ದ ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟರೆ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಎದೆನೋವು ತಾಳದೆ ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಮಸ್ಕಿಯಿಂದ ಸಿಂಧನೂರಿಗೆ ಆಂಬ್ಯುಲೆನ್ಸ್ ವಾಹನದಲ್ಲಿ ತೆರಳುತ್ತಿದ್ದ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಿಂಧನೂರು ತಾಲೂಕಿನ ಪಗಡದಿನ್ನಿ ಕ್ಯಾಂಪ್‌ನ ನಿವಾಸಿ ಶರಣಬಸವ (30) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮಕ್ಕೆ ಕುಟುಂಬದೊಂದಿಗೆ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ತೆರಳಿದ್ದರು. ಭಾನುವಾರ ರಾತ್ರಿ ಮನೆ ಮೇಲೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ನಂತರ ಚಿಕಿತ್ಸೆಗಾಗಿ ಮಸ್ಕಿ ತಾಲೂಕು ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದರು. ನಂತರ ಸಿಂಧನೂರು ನಗರದ ಆಸ್ಪತ್ರೆಯ ಆಂಬ್ಯುಲೆನ್ಸ್‌ಲ್ಲಿ ತೆರಳುತ್ತಿದ್ದಾಗ ನಿಧನರಾಗಿದ್ದಾರೆ ಎಂದು ಕುಟುಂಬದವರು
ತಿಳಿಸಿದ್ದಾರೆ.
ಶರಣಬಸವ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಾವಿಗೆ ಮಸ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಇಲ್ಲದೆ ಇರುವುದೇ ಕಾರಣವೆಂದು ಕುಟುಂಬಸ್ಥರ ಆರೋಪವಾಗಿದೆ.
ಹೃದಯಾಘಾತದಿಂದ ಆಟೋ ಚಾಲಕ ಸಾವು
ದಾವಣಗೆರೆ: ಆಟೋದಲ್ಲಿ ಕುಳಿತಿದ್ದ ಚಾಲಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೋಮವಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ನಗರದ ಎಸ್‌ಒಜಿ ಕಾಲೋನಿಯ ಎ ಬ್ಲಾಕ್‌ನ ಸಂಗಪ್ಪ (70) ಮೃತಪಟ್ಟ ಆಟೋ ಚಾಲಕ. ಎಂದಿನಂತೆ ಆಟೋ ಓಡಿಸಲು ಬಂದಿದ್ದ ಅವರು ಬೆಳಗ್ಗೆ ರೈಲ್ವೆ ನಿಲ್ದಾಣದಲ್ಲಿ ಆಟೋ ನಿಲುಗಡೆ ಮಾಡಿದ್ದರು. ಈ ವೇಳೆ ಆಟೋದಲ್ಲಿ ಕುಳಿತಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.