ದಾವಣಗೆರೆಯ ಪಿಎಸ್‌ಐ ತುಮಕೂರಿನಲ್ಲಿ ಆತ್ಮಹತ್ಯೆ

ದಾವಣಗೆರೆ: ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ್ ಅವರು ತುಮಕೂರಿನ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಭಾನುವಾರ ಬೆಳಕಿಗೆ ಬಂದಿದೆ.
ಜುಲೈ 1ರಂದು ದಾವಣಗೆರೆಯಿಂದ ಹೋಗಿದ್ದ ಪಿಎಸ್‌ಐ ನಾಗರಾಜ್ ಅವರು ತುಮಕೂರಿನ ಲಾಡ್ಜ್‌ನಲ್ಲಿ ತಂಗಿದ್ದರು. ಸುಮಾರು ಸಮಯದಿಂದ ಬಾಗಿಲು ತೆರೆಯದೇ ಇದ್ದರಿಂದ ಹಾಗೂ ರೂಂನಿಂದ ಕೆಟ್ಟ ವಾಸನೆ ಬಂದ ಕಾರಣ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ನಾಗರಾಜ್ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ತಾಲ್ಲೂಕಿನ ಜವಳಗಟ್ಟ ಗ್ರಾಮ ನಾಗರಾಜ್ ಅವರ ಸ್ವಂತ ಊರು. ಕೆಟಿಜೆ ನಗರ ಪೊಲೀಸ್ ಠಾಣೆ ಬಳಿಯ ಪೊಲೀಸ್ ವಸತಿ ಗೃಹದಲ್ಲಿ ವಾಸವಾಗಿದ್ದರು. ನಾಗರಾಜ್ ಅವರ ಪತ್ನಿ ಲಲಿತಾ ಲೋಕಿಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ನಾಗರಾಜ್ ಮದುವೆ ಮಾಡಿಕೊಟ್ಟಿದ್ದರು. ಇನ್ನು ಪುತ್ರ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಬಡಾವಣೆ ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ಆಗಿದ್ದ ನಾಗರಾಜ್ ಅವರು ೧೯೯೩ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಪೊಲೀಸ್ ಇಲಾಖೆಗೆ ನೇಮಕವಾಗಿದ್ದರು. ಬಳಿಕ ಮುಂಬಡ್ತಿ ಪಡೆದು ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪತ್ನಿ ದೂರು: ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಬಿ.ಆರ್. ನಾಗರಾಜ್ ಅವರ ಪತ್ನಿ ಲಲಿತಾ ಅವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ಜುಲೈ 2ರಂದು ಪತಿ ಕಾಣೆಯಾಗಿದ್ದು, ಹುಡುಕಿಕೊಡುವಂತೆ ದೂರು ನೀಡಿದ್ದರು.
ನಗರದ ನಿಟುವಳ್ಳಿಯ ಪೊಲೀಸ್ ಕ್ವಾಟರ್ಸ್‌ನಲ್ಲಿ ನಾನು ಮತ್ತು ನನ್ನ ಪತಿ ನಾಗರಾಜ್ ಒಟ್ಟಿಗೆ ವಾಸವಿದ್ದೆವು. ನನ್ನ ಗಂಡನಿಗೆ ಬಿಪಿ, ಶುಗರ್, ಥೈರಾಯಿಡ್, ವೆಕಿಕೋಸ್ವೇನ್ ಕಾಯಿಲೆಯೂ ಇದೆ. ಕೆಲಸದೊತ್ತಡ ಹಾಗೂ ಕಾಯಿಲೆಗಳಿಂದ ತುಂಬಾ ಟೆನ್ಶನ್ ಮಾಡಿಕೊಳ್ಳುತ್ತಿದ್ದರು.
ಕಳೆದ ಜೂನ್ ೩೦ರಂದು ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಮಧ್ಯಪ್ರದೇಶದಿಂದ ವಿಶೇಷ ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ನನಗೂ ಹಾಗೂ ನನ್ನ ಪತಿ ನಡುವೆ ಮನಸ್ತಾಪ ಬಂದಿದ್ದು, ಜಗಳವಾಗಿತ್ತು. ಮನಸ್ಸಿಗೆ ಬೇಸರ ಮಾಡಿಕೊಂಡು ರಾತ್ರಿ 2 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಹೋದವರು ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.