ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರಿನಲ್ಲಿ ನಿರ್ಮಾಣ ಮಾಡಿರುವ ಸೇತುವೆಯ ಲೋಕಾರ್ಪಣೆಯ ದಿನಾಂಕ ಘೋಷಣೆಯಾಗಿದೆ. ಜುಲೈ 14ರಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇಬಲ್ ಬ್ರಿಡ್ಜ್ ಅನ್ನು ಉದ್ಘಾಟನೆ ಮಾಡಲಿದ್ದಾರೆ.
ಕೆಲವು ದಿನಗಳ ಹಿಂದೆ ಸಿಗಂದೂರಿನ ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಕಳೆದ ವಾರದಿಂದ ಸೇತುವೆ ಮೇಲೆ ಲಾರಿಗಳ ಮೂಲಕ ಭಾರದ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಈಗ ಸೇತುವೆ ಲೋಕಾರ್ಪಣೆ ದಿನಾಂಕ ಪ್ರಕಟವಾಗಿದೆ.
ಶನಿವಾರ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಸಿಗಂದೂರು ಸೇತುವೆ ಲೋಕಾರ್ಪಣೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ್ ಜೋಶಿ ಸೇರಿದಂತೆ ವಿವಿಧ ನಾಯಕರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಗರ ತಾಲೂಕಿನಲ್ಲಿ ಶರಾವತಿ ಡ್ಯಾಂ ಹಿನ್ನೀರಿನಲ್ಲಿ ಕಳಸವಳ್ಳಿ-ಸಿಗಂದೂರು ನಡುವೆ ಸಂಪರ್ಕ ಕಲ್ಪಿಸಲು 2.44 ಕಿ. ಮೀ. ಉದ್ದದ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಯೋಜನೆಯ ವೆಚ್ಚ ಸುಮಾರು 423 ಕೋಟಿ ರೂ.ಗಳು.
ಸೇತುವೆ ನಾಮಕರಣದ ಕುರಿತು ಮಾತನಾಡಿದ ಸಂಸದ ಬಿ. ವೈ. ರಾಘವೇಂದ್ರ ಕರ್ನಾಟಕ ಸರ್ಕಾರ ಸಿಗಂದೂರು ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರನ್ನು ನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಹೇಳಿದರು.
2019ರಲ್ಲಿ ಈ ಕೇಬಲ್ ಸೇತುವೆಗೆ ನಿತಿನ್ ಗಡ್ಕರಿ ಅವರು ಶಂಕು ಸ್ಥಾಪನೆ ಮಾಡಿದ್ದರು. ಇದು ದೇಶದ 2ನೇ ಅತಿ ಉದ್ದದ ಕೇಬಲ್ ಮಾದರಿ ಸೇತುವೆಯಾಗಿದೆ. ಶರಾವತಿ ನದಿ ಹಿನ್ನೀರಿನಲ್ಲಿ ಹಲವು ಸವಾಲುಗಳನ್ನು ಎದುರಿಸಿ ಸೇತುವೆ ನಿರ್ಮಾಣ ಮಾಡಲಾಗಿದೆ.
2020ರಲ್ಲಿ ಈ ಸೇತುವೆ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಸಿಗಂದೂರು ಸೇತುವೆ ನಿರ್ಮಾಣದಿಂದ ಶರಾವತಿ ಹಿನ್ನೀರು ಭಾಗದ ಜನರ ಸಂಚಾರಕ್ಕೆ ಅನುಕೂಲವಾಗಲಿದೆ. ಲಿಂಗನಮಕ್ಕಿ ಜಲಾಶಯ ನಿರ್ಮಾಣದ ನಂತರ ಹಿನ್ನೀರಿನ ಭಾಗದ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಲಾಂಚ್ ಮೂಲಕ ಅವರು ಸಂಚಾರವನ್ನು ನಡೆಸಬೇಕಿತ್ತು.
ಈ ಸೇತುವೆಯಿಂದಾಗಿ ಸಿಗಂದೂರು, ಕೊಲ್ಲೂರು, ಧರ್ಮಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಸಂಚಾರ ನಡೆಸುವ ಭಕ್ತರಿಗೂ ಸಹ ಅನುಕೂಲವಾಗಲಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾದ ಕಾರಣ ರಾಜ್ಯ ಸರ್ಕಾರ ಸೇತುವೆಗೆ ಹೆಸರನ್ನು ಶಿಫಾರಸು ಮಾಡಿ ಕಳಿಸಿದರೆ ಈ ಕುರಿತು ಕೇಂದ್ರ ಸರ್ಕಾರ ಘೋಷಣೆ ಮಾಡಲಿದೆ.
ಸೊರಬ ಶಾಸಕ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಶುಕ್ರವಾರ ಸಿಗಂದೂರು ದೇವಾಲಯಕ್ಕೆ ಭೇಟಿ ನೀಡಿದ್ದರು. ಬಳಿಕ ಸಿಗಂದೂರು ಸೇತುವೆಯನ್ನು ಪರಿಶೀಲನೆ ಮಾಡಿದ್ದರು. ಸೇತುವೆಗೆ ಹೆಸರು ಇಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಒಪ್ಪಿಗೆಯನ್ನು ಪಡೆಯಬೇಕಿದೆ.
ಸಚಿವ ಮಧು ಬಂಗಾರಪ್ಪ, ‘ಐತಿಹಾಸಿಕ ಸಿಗಂದೂರು ಕ್ಷೇತ್ರದ ಸಂಪರ್ಕ ಸೇತುವೆ ಶೀಘ್ರದಲ್ಲಿಯೇ ಸಂಚಾರಕ್ಕೆ ಮುಕ್ತವಾಗಲಿದೆ. ಶರಾವತಿ ಹಿನ್ನೀರ ಜನರ ದ್ವೀಪದ ಬದುಕಿನ ಸಂಕಷ್ಟಕ್ಕೆ ತಿಲಾಂಜಲಿ ಹೇಳಿ ಹೊಸ ಶಕೆಯ ಆರಂಭದ ಭರವಸೆ ಮೂಡಿಸಿರುವ ಐತಿಹಾಸಿಕ ಸಿಗಂದೂರು ಸೇತುವೆ ಕಾಮಗಾರಿಯು ಅಂತಿಮ ಹಂತಕ್ಕೆ ತಲುಪಿದ್ದು, ದೇಶದ ಎರಡನೇ ಅತೀ ದೊಡ್ಡ ಸೇತುವೆ ಕಾಮಗಾರಿಯನ್ನು ಪರಿವೀಕ್ಷಿಸಿ, ಕಾಮಗಾರಿಯ ಗುಣಮಟ್ಟ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದೆನು’ ಎಂದು ಪೋಸ್ಟ್ ಹಾಕಿದ್ದರು.