ಮುಖ್ಯ ಮಂತ್ರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ

ಬೆಂಗಳೂರು: ಅಹರ್ನಿಶಿ ಟೊಂಕಕಟ್ಟಿ ದುಡಿಯುವ ಪೊಲೀಸರ ಮನೋಸ್ಥೈರ್ಯಕ್ಕೆ ಧಕ್ಕೆ ತರುವಂತ ಕೆಲಸವನ್ನು ಮುಖ್ಯ ಮಂತ್ರಿಗಳು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಕಳೆದ 31 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎನ್.ವಿ.ಭರಮಣಿ ಅವರು ಬೆಳಗಾವಿಯಲ್ಲಿ ಮುಖ್ಯ ಮಂತ್ರಿಗಳಿಂದ ಆದ ಅವಮಾನದಿಂದ ಬೇಸತ್ತು ತನ್ನ ಆತ್ಮಗೌರವಕ್ಕೆ ಚ್ಯುತಿ ಬಂದಿದೆ ಎಂದು ಸೇವೆಯಿಂದ ಸ್ವಯಂ ನಿವೃತ್ತಿ ನೀಡಿದ್ದಾರೆ. ಅಧಿಕಾರಿಗಳೊಂದಿಗೆ ಗೌರವಯುತವಾಗಿ, ಘನತೆಯಿಂದ ನಡೆದುಕೊಳ್ಳದ ಮುಖ್ಯ ಮಂತ್ರಿಗಳಿಗೆ ಧಿಕ್ಕಾರ. ಇದು ನಾಗರೀಕ ಸಮಾಜವೇ ತಲೆ ತಗ್ಗಿಸುವಂತ ವಿಚಾರ. ಅದರಲ್ಲೂ, ಅಹರ್ನಿಶಿ ಟೊಂಕಕಟ್ಟಿ ದುಡಿಯುವ ಪೊಲೀಸರ ಮನೋಸ್ಥೈರ್ಯಕ್ಕೆ ಧಕ್ಕೆ ತರುವಂತ ಕೆಲಸವನ್ನು ಮುಖ್ಯ ಮಂತ್ರಿಗಳು ಮಾಡಿದ್ದಾರೆ. ಸದನದಲ್ಲಿ ನೈತಿಕತೆ, ವ್ಯಾಕರಣ, ಆರ್ಥಿಕ ಶಿಸ್ತಿನ ಬಗ್ಗೆ ಪುಂಖಾನುಪುಂಖವಾಗಿ ಭಾಷಣ ಬಿಗಿಯುವ ಸಿದ್ದರಾಮಯ್ಯನವರು ಹಿರಿಯ ಪೊಲೀಸ್ ಅಧಿಕಾರಿ ಭರಮಣಿ ಅವರಿಗೆ ಕ್ಷಮೆಯಾಚಿಸಬೇಕು. ಇದು ಕೇವಲ ಭರಮಣಿ ಅವರಿಗೆ ಆದ ಅವಮಾನವಲ್ಲ, ಕರ್ನಾಟಕದ ಸರ್ಕಾರದಡಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ದಕ್ಷ, ನಿಷ್ಠಾವಂತ ಅಧಿಕಾರಿಗಳ ಆತ್ಮಗೌರವಕ್ಕೆ ಮಾಡಿದ ಅವಮಾನ. ಮುಖ್ಯ ಮಂತ್ರಿಗಳು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ ಎಂದಿದ್ದಾರೆ.