ದಾಂಡೇಲಿ: ಕಳೆದೊಂದು ವಾರಗಳಿಂದ ದಾಂಡೇಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಳಿಯಾಳ ರಸ್ತೆಯಲ್ಲಿರುವ ಅಲಾಯಿಡ್ ಏರಿಯಾದ ರಸ್ತೆ ಬದಿಯಲ್ಲಿ ಚರಂಡಿಗಳ ನೀರು ಮನೆಗಳಿಗೆ ಹರಿದು ಬರುತ್ತಿದೆ.
ಇಲ್ಲಿಯ ಚರಂಡಿಗಳು ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಮಲೀನ ನೀರು ಮನೆಗಳಿಗೆ ಹರಿದು ಬರುತ್ತಿದೆ ಎಂದು ಮನೆಯವರು ದೂರಿದ್ದಾರೆ. ಈ ಗಟಾರಿನಲ್ಲಿ ಶೌಚಾಲಯಗಳ ಹೊಲಸು ಸೇರಿ ನೀರು ಹರಿದು ಬರುತ್ತಿದೆ. ಇದರಿಂದ ರೋಗ ಹರಡುವ ಸಾಧ್ಯತೆ ಬಗ್ಗೆ ಜನರು ಭೀತಿ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲೊಂದು ಮ್ಯಾನ್ ಹೋಲ್ ಇದ್ದು ಅದಕ್ಕೆ ಸರಿಯಾದ ಮುಚ್ಚಳವಿಲ್ಲ. ಇಲ್ಲಿ ಮಕ್ಕಳು ಆಟವಾಡುವಾಗ ಬೀಳುವ ಸಾಧ್ಯತೆ ಇದೆ. ಸ್ಥಳೀಯ ನಗರಸಭೆ ಇಲ್ಲಿಯ ಸ್ವಚ್ಛತೆಗೆ ಆದ್ಯತೆ ನೀಡದಿರುವದು ಈ ಎಲ್ಲ ಅವ್ಯವಸ್ಥೆಗೆ ಕಾರಣವಾಗಿದೆ. ನಗರಸಭೆ ಅಧಿಕಾರಗಳು, ನಗರಸಭಾಧ್ಯಕ್ಷರು ಕೂಡಲೇ ಸ್ಥಳ ಪರಿಶೀಲನೆ ಮಾಡಿ ಚರಂಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಮತ್ತು ಮ್ಯಾನ್ ಹೋಲ್ ಗೆ ಮುಚ್ಚಳ ಅಳವಡಿಸುವಂತೆ ಸೂಕ್ತ ಕ್ರಮ ಜರುಗಿಸಲು ಸ್ಥಳೀಯ ನಿವಾಸಿಗರು ಆಗ್ರಹಿಸಿದ್ದಾರೆ.






















