Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ತುಷ್ಟೀಕರಣದಿಂದ ಕಾಂಗ್ರೆಸ್ ಮೂಲೆಗುಂಪು:‌ ಕಟೀಲ್

ತುಷ್ಟೀಕರಣದಿಂದ ಕಾಂಗ್ರೆಸ್ ಮೂಲೆಗುಂಪು:‌ ಕಟೀಲ್

0
84

ಕಾರವಾರ: ಒಡೆದು ಆಳುವ, ತುಷ್ಟೀಕರಣ ರಾಜನೀತಿಯಿಂದಾಗಿ ಕಾಂಗ್ರೆಸ್ ಮೂಲೆ ಗುಂಪಾಗುತ್ತಿದೆ. ಮುಂದಿನ ಚುನಾವಣೆಯಲ್ಲೂ ಕುಟುಂಬ, ಪರಿವಾರ ರಾಜಕಾರಣ ಹೋಗಿ ಅಭಿವೃದ್ಧಿ ರಾಜಕಾರಣ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದರು.
ಮುರುಡೇಶ್ವರದ ಆರ್‌ಎನ್‌ಎಸ್ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಸಮರ್ಥನೆ ಮಾಡುತ್ತಿರುವ, ಭಯೋತ್ಪಾದಕರಿಗೆ ಬೆಂಗಾವಲಾಗಿ ನಿಂತಿರುವ ಕಾಂಗ್ರೆಸ್ ಇದೊಂದು ಭಯೋತ್ಪಾದಕ ಪಾರ್ಟಿಯಾಗಿದೆ. ಉಗ್ರನ ಎನ್‌ಕೌಂಟರ್ ಮಾಡಿದಾಗ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರೊಬ್ಬರು ಕಣ್ಣೀರು ಹಾಕುತ್ತಾರೆ. ಆದರೆ ಸೈನಿಕರು ಸತ್ತಾಗ ಇವರು ಕಣ್ಣೀರು ಹಾಕುವುದಿಲ್ಲ. ಭ್ರಷ್ಟಾಚಾರಕ್ಕೆ ಅತಿ ಹೆಚ್ಚು ಆದ್ಯತೆ ಕೊಟ್ಟಿದ್ದು ಕಾಂಗ್ರೆಸ್. ಮೋದಿ ಬಂದ ಮೇಲೆ ಭ್ರಷ್ಟಾಚಾರ ಇಲ್ಲವಾಗಿದೆ ಎಂದರು.
ಉದ್ಯೋಗದ ಬಗ್ಗೆ ಮಾತನಾಡುವ ಕಾಂಗ್ರೆಸ್ ಆಡಳಿತದಲ್ಲಿ ಕೇವಲ ಬಾಂಬಿನ ಕಾರ್ಖಾನೆಗಳು ಮಾತ್ರ ಪ್ರಾರಂಭವಾಗಿದ್ದು, ಭಯೋತ್ಪಾದನೆಗೆ ಪ್ರೇರಣೆ ನೀಡಲಾಗಿದ ಅಲ್ಪಸಂಖ್ಯಾತರ ತುಷ್ಟೀಕರಣ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಒಡೆದು ಆಳುವ ನೀತಿ ಅನುಸರಿಸಿದೆ. ಇದೇ ಮಾನಸಿಕತೆಯಲ್ಲಿ ಇಸ್ಲಾಂನಲ್ಲಿ ಜಯಂತಿಗೆ ಬೇಡಿಕೆ ಇಲ್ಲದಿದ್ದರೂ ಟಿಪ್ಪುವಿನ ಜಯಂತಿ ಆಚರಣೆಗೆ ಸಿದ್ದರಾಮಯ್ಯ ಮುಂದಾಗಿದ್ದರು. ಸಾವರ್ಕರ್ ವಿರೋಧ ಮಾಡುವ ಅವರು ಇತಿಹಾಸ ಓದಬೇಕು ಎಂದರು.
ಕಾಂಗ್ರೆಸ್ ಮನಸ್ಥಿತಿ ಸ್ವಾತಂತ್ರ‍್ಯದ ನಂತರದ ದಿನಗಳಲ್ಲಿ ಬದಲಾವಣೆ ಆಗಿದೆ. ಇದೀಗ ಕಾಂಗ್ರೆಸ್ ನೈಜವಾಗಿ ಉಳಿಯದೇ ನಕಲಿ ಕಾಂಗ್ರೆಸ್ ಮಾತ್ರ ಇದೆ. ಇದೇ ಕಾರಣಕ್ಕೆ ಮಹಾತ್ಮ ಗಾಂಧಿ ಅವರು ವಿಸರ್ಜನೆ ಮಾಡಬೇಕು ಎಂದಿದ್ದರು. ಗಾಂಧೀಜಿ ರಾಮ ರಾಜ್ಯದ ಪರಿಕಲ್ಪನೆ ನೀಡಿದ್ದರು. ಆದರೆ ಗಾಂಧಿ ಕನಸು ನನಸಾಗಿದ್ದು ಪ್ರಧಾನಿ ನರೇಂದ್ರ ಪ್ರಧಾನಿ ಆದ ಮೇಲೆ ಆಗಿದೆ ಎಂದರು.
ಗೂಂಡಾಗಿರಿ ರಾಜಕಾರಣದಿಂದ ಬಂದ ಡಿ.ಕೆ. ಶಿವಕುಮಾರ್ ಅವರು ವೋಟ್‌ ಬ್ಯಾಂಕ್ ರಾಜಕಾರಣಕ್ಕಾಗಿ ಭಯೋತ್ಪಾದನೆಯನ್ನೇ ಸಮರ್ಥನೆ ಮಾಡುವ ಕೆಲಸಕ್ಕಿಳಿದಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 24 ಹಿಂದೂಗಳ ಹತ್ಯೆಯಾದರೂ ಪರಿಹಾರ ನೀಡಿಲ್ಲ. ಆದರೆ ಶೃಂಗೇರಿಯಲ್ಲಿ ಹತ್ಯೆಯಾದ ಗೋಹಂತಕರಿಗೆ ಪರಿಹಾರ ನೀಡಿದೆ. ಲ್ಯಾಂಡ್ ಮಾಫಿಯಾದಲ್ಲಿ, ಡ್ರಗ್ಸ್ ಮಾಫಿಯಾಗೆ ಬೆಂಬಲ ನೀಡಿತ್ತು. ಆದರೆ ಇದೀಗ ಬೊಮ್ಮಾಯಿ ಸರ್ಕಾರ ಎಲ್ಲವನ್ನು ನಿಯಂತ್ರಣ ಮಾಡಿದೆ ಎಂದರು.
ಖರ್ಗೆಯನ್ನು ಮುಗಿಸಿ, ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ. ಅಂಬೇಡ್ಕರ್ ಫೋಟೋ ಕೂಡಾ ಇಡಲು ಬಿಡದ ಸಿದ್ದರಾಮಯ್ಯ ಅಹಿಂದ ಹೆಸರಿನಲ್ಲೇ ಅಧಿಕಾರ ಪಡೆದುಕೊಂಡಿದ್ದರು. ಕುಮಾರಣ್ಣ ನಮ್ಮ ಮುಖ್ಯಮಂತ್ರಿ ಮುಸಲ್ಮಾನ ಎಂದು ಹೇಳುತ್ತಾರೆ. ಮತ್ತೊಂದು ಕಡೆ ಮಹಿಳಾ ಮುಖ್ಯಮಂತ್ರಿ, ಇನ್ನೊಂದೆಡೆ ದಲಿತ ಮುಖ್ಯಮಂತ್ರಿ ಎನ್ನುತ್ತಾರೆ. ಅಭ್ಯರ್ಥಿಯ ಹೆಸರು ಹೇಳಿದರೆ ಕುಮಾರಣ್ಣನ ಹೆಂಡತಿ ಬಿಟ್ಟು ಹೋಗುತ್ತಾರೆ. ಕುಮಾರಣ್ಣ ಹಾಗೂ ರೇವಣ್ಣ ನಡುವೆ ಜಗಳವಾಗಿದ್ದು, ಅವರಲ್ಲಿ ಅಭ್ಯರ್ಥಿಗಳಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಈ ಬಾರಿ 150 ಸ್ಥಾನಗಳನ್ನು ಗೆಲ್ಲಲಿದೆ. ಎಂದೂ ಆಗದಷ್ಟು ಅಭಿವೃದ್ಧಿ ಕೆಲಸಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಆಗಿದೆ. ಎಲ್ಲ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡಬೇಕು. ಪಕ್ಷ ನೀಡುವ ಜವಾಬ್ದಾರಿಗಳನ್ನು ಪಾಲಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ವೇಳೆ ಶಾಸಕರಾದ ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ದಿನಕರ ಶೆಟ್ಟಿ ಸೇರಿದಂತೆ ರಾಜ್ಯದಿಂದ ಆಗಮಿಸಿದ 160 ಕ್ಕೂ ಹೆಚ್ಚು ಪದಾಧಿಕಾರಿಗಳು ಇದ್ದರು. ಬುಧವಾರವೂ ಸಭೆ ನಡೆಯಲಿದೆ.

Previous articleಗಾಯಾಳು ಶಿಕ್ಷಕಿ ಗೀತಾ ಆರೋಗ್ಯ ವಿಚಾರಿಸಿದ ಸಚಿವರು
Next articleನಕಲಿ ಅನುಕಂಪದ ನೌಕರಿ ಪ್ರಕರಣ ಬೆಳಕಿಗೆ