ಪುತ್ತೂರಿನ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ನಡೆದ ಘಟನೆ
ಪುತ್ತೂರು: ತುಂಬು ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಗರದ ಚಿಕ್ಕಪುತ್ತೂರಿನಲ್ಲಿ ಜೂ. 15ರ ರಾತ್ರಿ ವರದಿಯಾಗಿದೆ.
ಸುರತ್ಕಲ್ ಮೂಲದ ರೇಷ್ಮಾ ಅವರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಜೂ. 15ರ ರಾತ್ರಿ ಮನೆಯಲ್ಲಿ ರೇಷ್ಮಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ಮೃತರು ಪತಿ ಚಿಂತನ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಚಿಂತನ್ ಅವರು ಇತ್ತೀಚೆಗೆ ನಡೆದ ನಗರಸಭಾ ಚುನಾವಣೆಯಲ್ಲಿ ನೆಲ್ಲಿಕಟ್ಟೆ ವಾರ್ಡ್‌ನಿಂದ ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿ ಮಹಜರು ಸಿದ್ಧಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತನಿಖೆಯಿಂದ ತಿಳಿದು ಬರಬೇಕಿದೆ.
ಚಿಕ್ಕಪುತ್ತೂರಿನ ನಿವಾಸಿ, ಪುತ್ತಿಲ ಪರಿವಾರದ ಮುಖಂಡ ಚಿಂತನ್ ಅವರ ಪತ್ನಿ ರೇಷ್ಮಾ (28) ಮೃತ ದುರ್ದೈವಿ. ಏಳು ತಿಂಗಳ ಗರ್ಭಿಣಿಯಾಗಿದ್ದ ರೇಷ್ಮಾ ಅವರು, ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.