ಚಿಕ್ಕಮಗಳೂರು: ಭಾರೀ ಗಾಳಿ-ಮಳೆಗೆ ಗುಡ್ಡ ಕುಸಿತ, ವಾಹನ ಸಂಚರ ಸ್ಥಗಿತ

0
54

ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಗಾಳಿ-ಮಳೆ ಅಬ್ಬರ ಮುಂದುವರೆದಿದ್ದು ಭಾರೀ ಗಾಳಿ-ಮಳೆ ಮಳೆಗೆ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದ ಬಳಿ ನಡೆದಿದೆ.

ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿದಿರೋ ಪರಿಣಾಮ ಶೃಂಗೇರಿ-ಮಂಗಳೂರು ಸಂಚಾರ ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳಿಯರು ಸುರಿಯುತ್ತಿರೋ ಮಳೆ ಮಧ್ಯೆಯೇ ರಸ್ತೆಗೆ ಉರುಳಿರೋ ಮಣ್ಣನ್ನ ತೆರವು ಕಾರ್ಯಕ್ಕೆ ಮುಂದಾಗಿದ್ದಾರೆ.

ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿಯದಂತೆ ರಸ್ತೆ ಬದಿಗೆ ಕಟ್ಟಿದ್ದ ಕಬ್ಬಿಣದ ತಡೆಗೋಡೆಗಳು ಕುಸಿದು ಬಿದ್ದಿದೆ. ಮಳೆ ಜೊತೆ ಗಾಳಿ ಕೂಡ ವೇಗವಾಗಿ ಬೀಸುತ್ತಿರುವುದರಿಂದ ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರಾತ್ರಿ ಇಡೀ ಒಂದೇ ಸಮನೆ ನಿರಂತರವಾಗಿ ಮಳೆಯಾಗಿರುವುದರಿಂದ ಶೃಂಗೇರಿಯಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ.

ಈ ವರ್ಷ ಜನವರಿಯಿಂದಲೂ ನಿರಂತರವಾಗಿ ಮಳೆಯಾಗಿದ್ದು ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ. ಮಳೆ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಇನ್ನಷ್ಟು ಭೂಮಿ ಕುಸಿಯುವ ಆತಂಕ ಎದುರಾಗಿದ್ದು ವಾಹನ ಚಾಲಕರು ಬದಲಿ ಮಾರ್ಗವನ್ನು ಬಳಸಬೇಕಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆ ಮುಂದುವರೆದಿದ್ದು ಎಡಬಿಡದೆ ಒಂದೇ ಸಮನೆ ಮಳೆ ಸುರಿಯುತ್ತಿದೆ. ನಿನ್ನೆ ಕೂಡ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿತ್ತು. ಇಂದು ಶೃಂಗೇರಿಯಲ್ಲಿ ಭೂ ಕುಸಿತ ಉಂಟಾಗಿದೆ.

ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಳೆ ನಿರಂತರವಾಗಿದ್ದು ಮತ್ತಷ್ಟು ಅನಾಹುತ ಸಂಭವಿಸುವ ಆತಂಕ ಸ್ಥಳಿಯರನ್ನ ಕಾಡುತ್ತಿದೆ.

Previous article‘ಕಾಂತಾರ’ ಶೂಟಿಂಗ್ ವೇಳೆ ಬೋಟ್ ಪಲ್ಟಿ; ಈಜಿ ದಡ ಸೇರಿದ ರಿಷಬ್ ಶೆಟ್ಟಿ ಸೇರಿ 30 ಜನ
Next articleಹೆಲಿಕಾಪ್ಟರ್ ಪತನ: ಪೈಲಟ್ ಸೇರಿ 7 ಜನರು ಸಾವು