ರಾಜ್ಯದ ಮಂತ್ರಿ ಮಂಡಳದಲ್ಲೇ ವಿಶ್ವಾಸ ಇಲ್ಲ

ಸಂ.ಕ.ಸಮಾಚಾರ ಕಲಬುರಗಿ : ರಾಜ್ಯದ ಸಿಎಂ ಮತ್ತು ಡಿಸಿಎಂ ಅವರ ಒಳ ಜಗಳದಿಂದ ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕೇಂದ್ರದ ಆಹಾರ, ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ತಾವು ಜನಪ್ರಿಯರಾಗಬೇಕೆಂಬ ಕೆಟ್ಟ ಉದ್ದೇಶದಿಂದ ಸಿಎಂ ಮತ್ತು ಡಿಸಿಎಂ ದಿಢೀರ್ ಸಮಯ ನಿಗದಿ ಮಾಡಿದ್ದಾರೆ. ಈಗ ಆ ಹೇಳಿಕೆಗಳಿಂದ ನುಣಚಿಕೊಳ್ಳುತ್ತಿದ್ದಾರೆ ಎಂದರು.
ಈ ರೀತಿಯ ಗೊಂದಲಗಳಿಂದ ಕಾಲ್ತುಳಿದಂತಹ ಘಟನೆಗಳು ಆಗುತ್ತಿವೆ. ಒಮ್ಮೆ ರಾಜ್ಯಪಾಲರನ್ನು ಕರೆದಿಲ್ಲ ಸಿಎಂ ಹೇಳುತ್ತಾರೆ. ಒಮ್ಮೆ ಕರೆದಿದ್ದೇನೆ ಎನ್ನುತ್ತಾರೆ ಹೀಗೆ ಗೊಂದಲ ಹೇಳಿಕೆ ನೀಡಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮನೆ ಮಾತಾಗಿದೆ. ವರ್ಗಾವಣೆಗೆ ಕಲೆಕ್ಷನ್ ನಡೆಯುತ್ತಿದೆ. ಇದೊಂದು ಶೇ. ೬೦ ಸರ್ಕಾರವೆಂದು ಗುತ್ತಿಗೆದಾರರೇ ಹೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಅವರ ಮಂತ್ರಿ ಮಂಡದಲ್ಲೆ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸವಿಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಅಂತಾರೆ. ಗೃಹ ಲಕ್ಷ್ಮೀ ಯಾಕೆ ಬಂದಿಲ್ಲ ಅಂದ್ರೆ, ಅದೇನು ಸಂಬಳನಾ ಅಂತ ಕೇಳುತ್ತಾರೆ. ಗ್ಯಾರಂಟಿ ಯೋಜನೆಯಲ್ಲಿ ಕೆಎಸ್‌ಆರ್‌ಟಿಸಿ ಮತ್ತು ಇಂಧನ ಇಲಾಖೆಗೆ ಹಣ ನೀಡುತ್ತಿಲ್ಲ. ಇದಕ್ಕೆ ಸರ್ಕಾರ ಉತ್ತರ ನೀಡಬೇಕು ಎಂದರು.
ಕೇಂದ್ರದ ಎಲ್ಲ ನಿರ್ಧಾರಗಳಿಗೆ ವಿರೋಧ ಮಾಡುತ್ತಿದ್ದಾರೆ. ಏಮ್ಸ್ ಬಗ್ಗೆ ಇಲ್ಲಿಯವರೆಗೆ ಕೇಂದ್ರದಿಂದ ನಿರ್ಧಾರವಾಗಿಲ್ಲ. ಅದಕ್ಕಾಗಿ ಒಂದು ಕಮೀಟಿ ಇರುತ್ತೆ ಆ ಕಮೀಟಿ ನಿರ್ಧಾರ ಮಾಡುತ್ತೆ.
ನಾವೇನು ಕಲ್ಯಾಣ ಕರ್ನಾಟಕದಿಂದ ಏಮ್ಸ್ ಕಿತ್ತುಕೊಳ್ಳಲ್ಲ ಎಂದು ಸ್ಪಷ್ಟಪಡಿಸಿದರು.
ಅಹಮದಾಬಾದ್ ವಿಮಾನ ದುರಂತ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಕೇಂದ್ರ ಇದರ ಬಗ್ಗೆ ಹೊಣೆ ಹೊರಬೇಕು ಎಂದು ಕೈ ನಾಯಕರು ಹೇಳುತ್ತಾರೆ. ದೇಶದಲ್ಲಿ ಈ ರೀತಿ ದುರ್ಘಟನೆಯಾದ ಬಳಿಕ ಯಾವ ರೀತಿ ನಡೆದುಕೊಳ್ಳಬೇಕು ಎನ್ನೋದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲ. ಇಂತ ಬಾಲಿಶಃ ಹೇಳಿಕೆಗಳು ನೀಡುತ್ತಾರೆ. ವಿಮಾನ ಸುರಕ್ಷತೆ ಬಗ್ಗೆ ನಮ್ಮ ದೇಶದ ರ‍್ಯಾಕಿಂಗ್‌ನಲ್ಲಿ ೧ನೇ ಸ್ಥಾನಲ್ಲಿದೆ ಎಂದರು.