ರಾಕ್ಷಸನಿಂದ ಮನುಷ್ಯ: ಮನುಷ್ಯನಿಂದ ರಕ್ಕಸ

0
24

ಚಿತ್ರ : ಮಾದೇವ
ನಿರ್ದೇಶಕ : ನವೀನ್ ರೆಡ್ಡಿ
ನಿರ್ಮಾಪಕ : ಆರ್. ಕೇಶವ (ದೇವಸಂದ್ರ)
ಸಂಗೀತ : ಪ್ರದ್ಯೋತ್ತನ್
ಛಾಯಾಗ್ರಹಣ : ಬಾಲಕೃಷ್ಣ
ತಾರಾಗಣ : ವಿನೋದ್ ಪ್ರಭಾಕರ್, ಸೋನಲ್ ಮೊಂತೆರೋ, ಶ್ರೀನಗರ ಕಿಟ್ಟಿ, ಶ್ರುತಿ, ಮಾಲಾಶ್ರೀ, ಅಚ್ಯುತ್ ಕುಮಾರ್ ಮತ್ತಿತರರು. ನಿರ್ಮಾಣ: ಆರ್ ಕೇಶವ(ದೇವಸಂದ್ರ)
ರೇಟಿಂಗ್ : 3.5/5

– ಜಿ.ಆರ್.ಬಿ

ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಮಾದೇವ (ವಿನೋದ್ ಪ್ರಭಾಕರ್), ಅಪ್ಪನ ಸಾವಿನ ಘಟನೆ ಆತನನ್ನು ಇನಿಲ್ಲದಂತೆ ಘಾಸಿ ಮಾಡಿಬಿಡುತ್ತದೆ. ಅಲ್ಲಿಂದ ಆತ ಯಾರ ಕಣ್ಣೀರಿಗೂ ಮರುಗುವುದಿಲ್ಲ, ಯಾರ ಮುಲಾಜಿಗೂ ಕ್ಯಾರೆ ಎನ್ನುವುದಿಲ್ಲ. ಮಾದೇವನ ತಂದೆ ಜೈಲಿನಲ್ಲಿ ಕೆಲಸ ಮಾಡುತ್ತಿದ್ದರಿಂದ ಅನುಕಂಪದ ಆಧಾರದ ಮೇಲೆ ಮಾದೇವನಿಗೂ ಜೈಲಿನಲ್ಲಿ ಕೆಲಸ ಸಿಗುತ್ತದೆ. ಹೆಚ್ಚು ಓದಿರದ ಕಾರಣ ನೇಣು ಹಾಕುವ ಕಾಯಕ ತನ್ನದಾಗಿಸಿಕೊಳ್ಳುವ ನಾಯಕ, ತುಸು ಹೆಚ್ಚೇ ಒರಟ. ಹುಡುಗಿಯರ ಗಾಳಿಯು ಸೋಕದಂತೆ ಎಚ್ಚರ ವಹಿಸುವ ‘ಮಾದೇವ’ ಪ್ರೀತಿಯ ತಂಗಾಳಿಗೆ ಮೈ ಒಡ್ಡುವುದಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ.

ಮೊದ ಮೊದಲು ರಕ್ಕಸನಂತೆ ಆಡುವ ನಾಯಕ, ಮಧ್ಯಂತರದ ಹೊತ್ತಿಗೆ ಮನುಷ್ಯ ರೂಪ ತಾಳುತ್ತಾನೆ. ಅದರೆ ವಿಧಿ ಆತನ ಬಾಳಿನಲ್ಲಿ ಬೇರೆ ಬಗೆಯಲ್ಲಿ ಆಟ ಆಡಿ ಬಿಡುತ್ತದೆ. ಮುಂದೇನು… ಎಂದು ಕಾದು ಕುಳಿತವರಿಗೆ ಸಾಕ್ಷಾತ್ ರಾಕ್ಷಸ ದರ್ಶನವಾಗುತ್ತದೆ. ಇದಕ್ಕೆಲ್ಲ ಯಾರು ಕಾರಣ, ಇಷ್ಟೆಲ್ಲಾ ನಡೆಯಲು ಕಾರಣಕರ್ತರು ಯಾರೆಂದು ನೀಟಾಗಿ ಬಿಡಿಸಿಡುತ್ತಾರೆ ನಿರ್ದೇಶಕ ನವೀನ್ ರೆಡ್ಡಿ.

ಇಡೀ ಸಿನಿಮಾವನ್ನು ರೆಟ್ರೋ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಕಥೆ. ಹೀಗಾಗಿ ಅದರ ಹಿಂದಿನ ತಯಾರಿ ಸಹ ಅಚ್ಚುಕಟ್ಟು. ಸೇಡಿನ ಕಥೆಗೆ ತುಸು ಭಿನ್ನ ನಿರೂಪಣೆ ಮೂಲಕ ಗಮನ ಸೆಳೆಯುವಂತೆ ಮಾಡುವಲ್ಲಿ ನಾವೀನ್ಯತೆ ಮೆರೆದಿದ್ದಾರೆ ನವೀನ್.

ಚಿತ್ರಕ್ಕೆ ಮೆರುಗು ತುಂಬುವಲ್ಲಿ ತಾರಾಗಣ ಮುಖ್ಯವಾಗಿ ಕೆಲಸ ಮಾಡಿದೆ. ವಿನೋದ್ ಪ್ರಭಾಕರ್ ಈವರೆಗಿನ ಸಿನಿಮಾಗಳಿಗಿಂತ ಇಲ್ಲಿ ತುಸು ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದೆ. ಎರಡೂ ರೂಪದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸೋನಾಲ್ ಮಂತೇರೋ ಗ್ಲಾಮರ್ ಗೆ ಮಾತ್ರ ಸೀಮಿತವಾಗದೇ ಅಭಿನಯಕ್ಕೂ ಒಗ್ಗಿಕೊಂಡಿದ್ದಾರೆ. ಶ್ರುತಿ ಪಾತ್ರದ ಏರಿಳಿತ ಕೊನೆಯವರೆಗೂ ನೆನಪಿನಲ್ಲಿಡುವಂತೆ ಮಾಡುತ್ತದೆ. ಮಾಲಾಶ್ರೀ ಕೆಲವೇ ನಿಮಿಷ ಕಾಣಿಸಿಕೊಂಡರೂ ತೆರೆಯ ಮೇಲೆ ಇದ್ದಷ್ಟು ಹೊತ್ತು ಶಿಳ್ಳೆ ಗಿಟ್ಟಿಸಿಕೊಳ್ಳುವಂತೆ ಜಮಾಯಿಸಿದ್ದಾರೆ. ಶ್ರೀನಗರ ಕಿಟ್ಟಿ ಪಾತ್ರ ಮಾತ್ರ ಔಟ್ ಆಫ್ ದಿ ಬಾಕ್ಸ್ ಎನಿಸುತ್ತದೆ. ತಾಂತ್ರಿಕವಾಗಿಯೂ ಸಿನಿಮಾ ಸದ್ದು ಮಾಡುತ್ತದೆ.

Previous articleಮೆಸ್ಕಾಂ ಸಹಾಯಕ ಎಂಜಿನಿಯರ್‌ ಲೋಕಾಯುಕ್ತ ಬಲೆಗೆ
Next articleಸೋಷಿಯಲ್ ಮೀಡಿಯಾ ದುರುಪಯೋಗ ಬೇಡ: ಡ್ರಗ್ಸ್ ನಿಂದ ದೂರವಿರಿ