ಜೈ ಹೋ ಆರ್ ಸಿ ಬಿ…ಫಲಿಸಿದ ಪೂಜಾ ಫಲ

0
37

ಹುಬ್ಬಳ್ಳಿ: ಆರ್ ಸಿ ಬಿ ತಂಡ ಚಾಂಪಿಯನ್ಸ್ ಟ್ರೋಫಿ ಕೈಗೆತ್ತಿಕೊಳ್ಳುತ್ತಿದ್ದಂತೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕರ್ನಾಟಕದ ಬಾವುಟ ಹಿಡಿದು, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.

ಬೆಳಗ್ಗೆಯಿಂದ ವಿವಿಧ ದೇವಸ್ಥಾನಗಳಲ್ಲಿ ಸಲ್ಲಿಸಿದ ಪೂಜೆ ಫಲಿಸಿತು ಎಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಅಹಮ್ದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್ ಸಿ ಬಿ ತಂಡ ಗೆಲುವಿನ ಕೇಕೆ ಹಾಕುತ್ತಲೇ, ಇತ್ತ ಅಭಿಮಾನಿಗಳು ಜಯಘೋಷ ಮೊಳಗಿಸಿದರು. ನಗರ ಕಿತ್ತೂರು ರಾಣಿ ಚನಮ್ಮ ವೃತ್ತ, ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕರ್ನಾಟಕದ ಬಾವುಟ ಹಿಡಿದು ಜಯಘೋಷ ಮೊಳಗಿಸಿದರು. ಜೈ ಹೋ ಭಾರತ ಹಾಡು ಹಾಡಿ ಅಭಿಮಾನ ಮೆರೆದರು.

ಮಕ್ಕಳು, ವಯಸ್ಕರರು, ವೃದ್ಧರು ಹಾಗೂ ಮಹಿಳೆಯರು ಸೇರಿದಂತೆ ಎಲ್ಲರೂ ಸೇರಿ ಆರ್ ಸಿಬಿ ತಂಡದ ಗೆಲುವನ್ನು ಸಂಭ್ರಮಿಸಿದರು. ಅಲ್ಲದೆ, ಪಟಾಕಿ, ಬಾಣ, ಬಿರುಸುಗಳು ಆಕಾಶವನ್ನು ಮತ್ತಷ್ಟು ಅಂದಗೊಳಿಸಿದ್ದವು. ರಸ್ತೆಯುದ್ದಕ್ಕೂ ಬೃಹತ್ ಗಾತ್ರದ ಪಟಾಲಿಗಳನ್ನು ಸಿಡಿಸಿ ಕುಣಿದು ಕುಪ್ಪಳಿಸಿದರು.

ಅಂತಿಮ ಪಂದ್ಯದ ರೋಚಕ ಕ್ಷಣಗಳು, ಗೆಲುವಿನ ದಡವನ್ನು ಆರ್ ಸಿ ಬಿ ಸೇರಿದ್ದನ್ನು ಪರಸ್ಪರ ಹಂಚಿಕೊಂಡ ಅಭಿಮಾನಿಗಳು, ಆಟಗಾರರ ಅಗಾಧ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ಆರ್ ಸಿ ಬಿ ತಂಡ ಕಪ್ ಗೆಲ್ಲುವ ಮೂಲಕ 18 ವರ್ಷಗಳ ಸೇರು ತೀರಿಸಿಕೊಂಡಿದೆ. ಇನ್ನು ಫೈನಲ್ ಕ್ರಿಕೆಟ್ ಮ್ಯಾಚ್ ಹಿನ್ನೆಲೆಯಲ್ಲಿ ಹೊಟೇಲ್, ಲಾಡ್ಜ್‌ಗಳಲ್ಲಿ ಕ್ರಿಕೆಟ್ ಕ್ರೇಜಿಗಳ ಸಂಭ್ರಮ ಜೋರಾಗಿತ್ತು.

ಅರ್ ಸಿ ಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ನಡೆಸಿದ ಸೆಣಸಾಟ ಕಣ್ಣುಂಬಿಕೊಳ್ಳಲು ನಗರದ ಸ್ಟಾರ್ ಹೊಟೇಲ್, ಲಾಡ್ಜ್‌ಗಳಲ್ಲಿ ಕ್ರಿಕೆಟ್ ಅಭಿಮಾನಿಗಳು, ಪರ ಊರಿನ ಕ್ರಿಕೆಟ್ ಅಭಿಮಾನಿಗಳು ಬೆಳಿಗ್ಗೆಯೇ ಬಂದು ಠಿಕಾಣಿ ಹೂಡಿದ್ದರು.

ಕ್ರಿಕೆಟ್ ಅಭಿಮಾನಿಗಳ ಉತ್ಸಾಹ, ಸಡಗರ ಕಂಡು ಸ್ಟಾರ್ ಹೊಟೇಲ್ ನವರು ಬಿಗ್ ಸ್ಟೀನ್ ಆಳವಡಿಸಿ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ದುಪಟ್ಟುಗೊಳಿಸಿದರು. ಸಂಜೆ 7:30 ರಿಂದ ರಾತ್ರಿ 11:30 ರ ವರೆಗೆ ನಡೆದ ಪಂದ್ಯಾವಳಿಯನ್ನು ಅಭಿಮಾನಿಗಳು ಅಲುಗದೆ ಕಣ್ಣುಂಬಿಕೊಂಡರು. ತಮ್ಮ‌ನೆಚ್ಚಿನ ನಾಯಕರು ಬೌಂಡರಿ ಬಾರಿಸಿದಾಗ ಮತ್ತು ವಿಕೆಟ್ ಪಡೆದಾಗಲೆಲ್ಲ ಪಟಾಕಿ ಸಿಸಿಡಿ ಸಂಭ್ರಮಿಸುತ್ತಿದ್ದರು. ಅಲ್ದದೇ, ವಿರಾಟ ಕೊಹ್ಲಿ, ಪಿಲ್ ಸಾಲ್ಟ್, ಜಿತೇಶ ಶರ್ಮಾ, ರಹತ್ ಪಾಟೀದಾರ್, ಶೆಫರ್ಡ್ ಹಾಗೂ ಮಯಾಂಕ ಅಗರ್ವಾಲ್ ವಿಕೆಟ್ ಬಿದ್ದಾಗ ಕ್ರಿಕೆಟ್ ಪ್ರೇಮಿಗಳಿಗೆ ಕೊಂಚ ನಿರಾಸೆಯಾಗಿತ್ತು. ಬಳಿಕ ಆರ್ ಸಿ ಬಿ ತಂಡ ಎದುರಾಳಿ ತಂಡದ ವಿಕೆಟ್ ಪಡೆದಾಗ ಸಿಳ್ಳೆ, ಕೇಕೆ ಹಕುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು.

Previous articleಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಮೃತ್ಯು
Next articleಈ ಸಲಾ ಕಪ್ ನಮ್ದೇ..‌.