Home Advertisement
Home ನಮ್ಮ ಜಿಲ್ಲೆ ಧಾರವಾಡ ಆರೋಪಿ ಕೃತ್ಯ ಬೆಂಬಲಿಸಿಲ್ಲ; ನನ್ನ ಹೇಳಿಕೆಗೆ ಬದ್ಧ: ಡಿಕೆಶಿ

ಆರೋಪಿ ಕೃತ್ಯ ಬೆಂಬಲಿಸಿಲ್ಲ; ನನ್ನ ಹೇಳಿಕೆಗೆ ಬದ್ಧ: ಡಿಕೆಶಿ

0
82

ಹುಬ್ಬಳ್ಳಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಕುರಿತ ತಮ್ಮ ಹೇಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಮರ್ಥಿಸಿಕೊಂಡಿದ್ದಾರೆ.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದು, ಆತನ ಬಗ್ಗೆ ತಿಳಿಯಲು ಐದಾರು ದಿನಗಳು ಬೇಕಾಗುತ್ತದೆ.‌ ಹಾಗಾಗಿ ಈಗಲೇ ಏನೂ ಹೇಳಲಾಗುವುದಿಲ್ಲ. ಘಟನೆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಹೇಳಿದ್ದರು. ಆದರೆ ಈ ಬಗ್ಗೆ ತನಿಖೆ ನಡೆಯದೇ ಡಿಜಿಪಿ ಪ್ರಕರಣಕ್ಕೆ ಉಗ್ರವಾದಿಗಳ ಕೃತ್ಯ ಎಂದು ಹೇಳಿಕೆ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.
ಗೃಹ ಸಚಿವರು ಹೇಳಿಕೆ ನೀಡಿದ್ದರೆ ಅದು ರಾಜಕೀಯವಾಗಿ ಎನ್ನಬಹುದಿತ್ತು. ಈ ಹಂತದಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಭಾರೀ ಚರ್ಚೆಯಲ್ಲಿದ್ದ ದೊಡ್ಡ ಮಟ್ಟದ ಭ್ರಷ್ಟಾಚಾರ, ಮತ ಕಳ್ಳತನ, ನಕಲಿ ವೋಟರ್ಸ್‌ ಸೇರ್ಪಡೆ ವಿಷಯವನ್ನು ಮರೆಮಾಚಲು ಸರಕಾರ ಈ ಹೇಳಿಕೆ ಕೊಡಿಸಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಯಾವಾಗಲೂ ಭಯೋತ್ಪಾದನೆ ವಿರೋಧಿಸುತ್ತ ಬಂದಿದೆ. ಇಂತಹ ಕೃತ್ಯಗಳಿಂದಾಗಿ ನಾವು ಪಕ್ಷದ ಹಲವು ನಾಯಕರನ್ನು ಕಳೆದುಕೊಂಡಿದ್ದೇವೆ. ಘಟನೆಯನ್ನು ಪಕ್ಷ ಖಂಡಿಸುತ್ತದೆ. ಆದರೆ ಕನಿಷ್ಠ ಮಟ್ಟದ ತನಿಖೆ ನಡೆಯದೇ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದು ಬಿಂಬಿಸಿರುವುದರ ಹಿಂದೆ ವಿಷಯಾಂತರದ ಸಂಚು ಅಡಗಿತ್ತು. ಇದನ್ನು ಹೇಳಿದ್ದೇನೆ.‌ ಆರೋಪಿ ಕೃತ್ಯವನ್ನು ಬೆಂಬಲಿಸಿಲ್ಲ ಎಂದರು.
ಸುರ್ಜೇವಾಲಾ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಬಸ್ ಯಾತ್ರೆ ಶೀಘ್ರವೇ ಆರಂಭಿಸಲಾಗುವುದು. ಇದಕ್ಕೆ ಪಕ್ಷದ ಯಾವ ನಾಯಕರೂ ಷರತ್ತು ಹಾಕಿಲ್ಲ. ಎಲ್ಲರೊಂದಿಗೆ ಚರ್ಚಿಸಿಯೇ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದರು.
ಡಿ. 30ರಂದು ಕೃಷ್ಣಾ ನದಿ ನೀರು ಹಂಚಿಕೆ ಕುರಿತು ವಿಜಯಪುರದಲ್ಲಿ ಹಾಗೂ ಜ. 2ರಂದು ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ಹುಬ್ಬಳ್ಳಿಯಲ್ಲಿ ಹಾಗೂ ಜ. 8ರಂದು ಎಸ್ಸಿ, ಎಸ್ಟಿ ಮೀಸಲಾತಿ ಬಗ್ಗೆ ಚಿತ್ರದುರ್ಗದಲ್ಲಿ ಸಭೆ ನಡೆಸಲಾಗುವುದು ಎಂದರು.
ಇದೇ ವೇಳೆ, ಅಮಾಯಕ ನೊಬೆಲ್ ಪ್ರಶಸ್ತಿ ಯಾವಾಗ ಕೊಡುತ್ತಾರೆ ತಿಳಿಸಲಿ. ಅದನ್ನು ಸ್ವೀಕರಿಸಲು ನಾನು ಸಿದ್ಧನೆಂದು ಸಚಿವ ಆರ್. ‌ಅಶೋಕ ಹೇಳಿಕೆಗೆ ತಿರುಗೇಟು ನೀಡಿದರು.
ಟಿಕೆಟ್ ಬಯಸಿ ಕೆಪಿಸಿಸಿಗೆ ಸಾವಿರಕ್ಕೂ ಅಧಿಕ ಅರ್ಜಿ ಬಂದಿವೆ. ಈ ಕುರಿತು ಇಂದು ಬೆಳಗಾವಿಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ ಸುರ್ಜೇವಾಲೆ ನೇತೃತ್ವದಲ್ಲಿ ನಡೆಯಲಿರುವ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು. ಗೆಲ್ಲುವ ಅರ್ಹತೆಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದರು.

Previous articleಜ. 2ರಂದು ಮಹಾದಾಯಿ ಯೋಜನೆ ಅನುಷ್ಠಾನ ಕುರಿತು ಹುಬ್ಬಳ್ಳಿಯಲ್ಲಿ ಹೋರಾಟ ಸಮಾವೇಶ: ಡಿಕೆಶಿ
Next articleಫೇಸ್‌ ಶೀಲ್ಡ್‌ಗೆ ಮೊರೆ ಹೋದ ಮಹಾ ಸಚಿವ