ರಾಜ್ಯದಲ್ಲಿ ೧೦೦ ಕಾಲುಸಂಕ ನಿರ್ಮಾಣಕ್ಕೆ ನೀಲಿ ನಕ್ಷೆ

ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರತೀವರ್ಷ ೧೦೦ ಕಾಲುಸಂಕ ನಿರ್ಮಿಸಲು ನೀಲಿ ನಕ್ಷೆ ತಯಾರಿಸಲಾಗಿದ್ದು, ಈಗಾಗಲೇ ೨೦ ಕೋಟಿ ರೂ. ಅನುದಾನದಲ್ಲಿ ೨೦ ಕಡೆ ಕಾಲುಸಂಕ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಮಾನ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಮೂಡಿಗೆರೆ ತಾಲ್ಲೂಕಿನ ಹಳಸೆ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ೩೬ ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಿಸಲು ಪ್ರಾಥಮಿಕ ಹಂತದಲ್ಲಿ ತಲಾ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆಯಿಂದ ರಸ್ತೆ, ಸೇತುವೆ, ರೈತರ ಬೆಳೆ ಮತ್ತಿತರ ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧದ ವರದಿ ಬಂದ ಕೂಡಲೆ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸಲು ಸೂಕ್ತ ಸೂಚನೆ ನೀಡಲಿದ್ದಾರೆ. ೨೦೧೯ ರಿಂದ ನಿರಂತರವಾಗಿ ಅತಿವೃಷ್ಟಿಯುಂಟಾಗಿ ಸೇತುವೆ, ರಸ್ತೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತದಿಂದ ಜಮೀನುಗಳಿಗೆ ಹಾನಿಯಾಗಿದ್ದು, ಅವುಗಳೆಲ್ಲವನ್ನು ಸರಿಪಡಿಸಲಾಗಿದೆ. ಕೆಲವೆಡೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.