ಮನೆ ಗೋಡೆ ಕುಸಿದು 3ವರ್ಷದ ಮಗು ಸಾವು

ಬೆಳಗಾವಿ: ಮಳೆಗೆ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.
ಗೋಕಾಕ್ ನಗರದ ಮಹಲಿಂಗೇಶ್ವರ ಕಾಲೋನಿಯಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಮೃತ ಮಗುವನ್ನು ಕೀರ್ತಿ ನಾಗೇಶ್ ಪೂಜಾರಿ (3) ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ ನಾಲ್ಕು ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಅಕ್ಕ – ತಂಗಿ ರೂಮ್‌ನಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದಿದೆ. ಪರಿಣಾಮ ಒಂದು ಮಗು ಸ್ಥಳದಲ್ಲೇ ಸಾವಿಗೀಡಾಗಿದೆ. ಗಾಯಗೊಂಡ ಇನ್ನೊಬ್ಬ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ವೇಳೆ ಮನೆಯ ಮತ್ತೊಂದು ರೂಮ್‌ನಲ್ಲಿ ಮಗುವಿನ ತಂದೆ ತಾಯಿ ಮಲಗಿದ್ದರು ಎನ್ನಲಾಗಿದೆ, ಸ್ಥಳಕ್ಕೆ ಗೋಕಾಕ್ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.