ಹೆಂಡತಿಯಿಂದ ಗಂಡನ ಕೊಲೆ

ಚಿಕ್ಕಮಗಳೂರು: ಸಂಸಾರದಲ್ಲಿ ಬಿರುಕು ಮತ್ತು ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಘಟನೆ ನರಸಿಂಹರಾಜಪುರ ತಾಲೂಕಿನಲ್ಲಿ ನಡೆದಿದ್ದು, 24 ಗಂಟೆಯಲ್ಲಿ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.
ಕಡುಹಿನಬೈಲು ಗ್ರಾಮದ ಕುರುಗುಂದ ಬಸ್‌ನಿಲ್ದಾಣದ ಸಮೀಪ ಅನುಮಾನಾಸ್ಪವಾಗಿ ವ್ಯಕ್ತಿ ಸಾವನ್ನಪ್ಪಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನರಸಿಂಹರಾಜಪುರ ಪಟ್ಟಣದ ಸುದರ್ಶನ್ ಮೃತ ವ್ಯಕ್ತಿ ಎಂದು ಗುರುತಿಸಿ, ಸುದರ್ಶನ್ ಹೆಂಡತಿ ಕಮಲ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಕಮಲ-ಸುದರ್ಶನ್ ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಮಕ್ಕಳಿದ್ದಾರೆ. ಆದರೆ, ಸಂಸಾರದಲ್ಲಿ ಹೊಂದಾಣಿಕೆ ಬಾರದೆ ಕಮಲ ಅನೇಕ ವರ್ಷಗಳಿಂದ ಪರಿಚಯಸ್ಥನಾಗಿದ್ದ ಶಿವರಾಜ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಮೇ 23ರಂದು ಶಿವರಾಜ್ ಹಾಗೂ ಇತರರ ಜತೆ ಸೇರಿ ನರಸಿಂಹರಾಜಪುರ ಕುರುಗುಂದ ಬಸ್ ನಿಲ್ದಾಣ ಸಮೀಪ ರಾತ್ರಿ ವೇಳೆ ನಾಲ್ವರು ಸೇರಿ ಸುದರ್ಶನ್‌ಗೆ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ, ಪ್ರಜ್ಞೆ ತಪ್ಪಿದಾಗ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಕೊಲೆಯಲ್ಲಿ ಭಾಗಿಯಾಗಿರುವ ಎಸ್.ಶಿವರಾಜ್, ಬಿ.ಆರ್.ಹರೀಶ್, ಬಿ.ಎಸ್. ಚನ್ನಕೇಶವ, ಕೃತ್ಯಕ್ಕೆ ಪ್ರಚೋದನೆ ನೀಡಿದ ಸುದರ್ಶನ್ ಹೆಂಡತಿ ಕಮಲ ಅವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ ವ್ಯಾಗನರ್ ವಾಹನ ವಶಕ್ಕೆ ಪಡೆಯಲಾಗಿದೆ.