ದಾವಣಗೆರೆ: ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ವಸತಿ ಸಚಿವ ಜಮೀರ್ ಅಹಮ್ಮದ್ ಬೇಸರ ವ್ಯಕ್ತಪಡಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಚಿತ್ರರಂಗದಲ್ಲಿ ಬಹಳಷ್ಟು ಪ್ರತಿಭಾವಂತ ನಟಿಯರಿದ್ದರು. ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದಿತ್ತು. ಆದರೆ ಈಗಾಗಲೇ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮಾಡಲಾಗಿದೆ. ಈ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದರು.
ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಆಯ್ಕೆ ಮಾಡಲು ನೀವೇ ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹೇಳಿಕೆ ನೀಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಮೀರ್ ಅಹಮ್ಮದ್, ಆ ಸಂದರ್ಭದಲ್ಲಿ ವಿಜಯೇಂದ್ರ ಅವರು ಎಲ್ಲೋ ನಮ್ಮ ಜೊತೆಯಲ್ಲಿ ಬಂದಿರಬಹುದು, ಅದಕ್ಕೆ ಹೇಳಿದ್ದಾರೆ ಎಂದು ಉತ್ತರಿಸಿದರು.
ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ:
ಸಚಿವ ಸಂಪುಟ ಪುನರ್ರಚನೆ ಆಗುತ್ತದೆ ಎಂದು ಹೇಳಲಾಗುತ್ತಿದೆ ಎಂಬ ಪ್ರಶ್ನೆಗೆ, ಪಕ್ಷದ ಹೈಕಮಾಂಡ್ ಇದೆ. ಈ ಬಗ್ಗೆ ನಾವೇನು ಹೇಳುವುದಕ್ಕೆ ಆಗುವುದಿಲ್ಲ. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧವಾಗಿದ್ದೇವೆ. ಸದ್ಯಕ್ಕೆ ಅಂತಹ ಸಂದರ್ಭ ಬಂದಿಲ್ಲ. ಹೈಕಮಾಂಡ್ ಸಚಿವ ಸಂಪುಟ ಪುನರ್ರಚನೆ ಯಾವಾಗ ಬೇಕಾದರೂ ಮಾಡಬಹುದು. ನಮಗೆ ಯಾರಿಗೂ ಅಭ್ಯಂತರವಿಲ್ಲ. ಹೈಕಮಾಂಡ್ ಗೆರೆ ಹಾಕಿದರೆ ನಾವು ಯಾರೂ ಗೆರೆ ದಾಟಲ್ಲ ಎಂದು ಪ್ರತಿಕ್ರಿಯಿಸಿದರು.
ಕೋವಿಡ್: ಯಾರೂ ಭಯಪಡಬೇಕಿಲ್ಲ
ರಾಜ್ಯದಲ್ಲಿ ಕೋವಿಡ್‌ಗೆ ಒಬ್ಬ ವೃದ್ಧ ಮತ್ತು 32 ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡು ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿದೆ. ಕೋವಿಡ್ ಗೆ ಯಾರು ಭಯ ಪಡುವ ಅವಶ್ಯಕತೆ ಇಲ್ಲ. ಆದರೆ ಪ್ರತಿಯೊಬ್ಬರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿದೆ. ಅದೇ ರೀತಿ ಕೋವಿಡ್ ಸೋಂಕು ಹರಡದಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. 2019ರಲ್ಲಿ ಕೋವಿಡ್ ಬಂದ ವೇಳೆ ನಾವು ಅನುಭವಿಸಿದ ಯಾತನೆ ಯಾರು ಕೂಡ ಮತ್ತೆ ಅನುಭವಿಸಬಾರದು. ಅಂತಹ ಪರಿಸ್ಥಿತಿ ಈಗ ಇಲ್ಲ. ಈ ನಿಟ್ಟಿನಲ್ಲಿ ನಮ್ಮ ಜಾಗೃತಿ ನಮಗಿರಬೇಕೆಂದು ಸಲಹೆ ನೀಡಿದರು.
ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರು ಆಗಲು ಕಾರಣವೇನು ಎಂಬ ಪ್ರಶ್ನೆಗೆ, ನೀವು ಮುಖ್ಯಮಂತ್ರಿಗಳನ್ನೇ ಕೇಳಬೇಕು ಎಂದು ಸ್ಪಷ್ಟವಾದ ಕಾರಣ ನೀಡದೆ ಹೆಲಿಪ್ಯಾಡ್ ನಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಭಾಷಾ, ಸಿರಾಜ್ ಮಹಮ್ಮದ್, ಅಪರ ಜಿಲ್ಲಾಧಿಕಾರಿ ಪಿ.ಎಸ್. ಲೋಕೇಶ್, ವಕ್ಫ್ ಮಂಡಳಿ ಅಧಿಕಾರಿಗಳು ಇದ್ದರು.
ಮದುವೆಗೆ 5 ಲಕ್ಷ ರೂ. ವೈಯಕ್ತಿಕ ಧನಸಹಾಯ
ಸಹೋದರಿ ಮದುವೆ ಮಾಡಲು ಬೆನ್ನೆಲುಬಾಗಿ ನಿಂತಿದ್ದ ಸಹೋದರ ಮೃತಪಟ್ಟಿದ್ದರಿಂದ ಮದುವೆ ಮಾಡಲು ಕಷ್ಟವಾಗುತ್ತದೆ ಎಂದು ಸಚಿವ ಜಮೀರ್ ಬಳಿ ಮಹಿಳೆಯೊಬ್ಬರು ತಮ್ಮ ಸಮಸ್ಯೆ ಹೇಳಿಕೊಂಡರು. ಸ್ಥಳದಲ್ಲೇ ಸಚಿವ ಜಮೀರ್ ಮದುವೆ ಮಾಡಲು 5 ಲಕ್ಷ ರೂ. ವೈಯಕ್ತಿಕವಾಗಿ ಧನ ಸಹಾಯ ಮಾಡಿ ಶುಭ ಹಾರೈಸಿದರು.