ರಾಣೆಬೆನ್ನೂರ ಇತಿಹಾಸದಲ್ಲಿಯೇ ಪ್ರಥಮ: ಎಸ್‌ಎಸ್‌ಎಲ್‌ಸಿಯಲ್ಲಿ ಬಿಸಿಯೂಟದ ಸಹಾಯಕಿಯ ಹಾಗೂ ಸೆಕ್ಯೂರಿಟಿ ಮಗ ರಾಜ್ಯಕ್ಕೆ ಪ್ರಥಮ: ಪೃಥ್ವಿಶ್‌ಗೆ ಐಎಎಸ್ ಮಾಡುವಾಸೆ!!
ವರದಿ : ಮಂಜುನಾಥ ಹೊಸಪೇಟೆ
ಸಂ.ಕ.ಸಮಾಚಾರ ರಾಣೇಬೆನ್ನೂರು : ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಣೇಬೆನ್ನೂರಿನ ಪೃಥ್ವಿಶ್ ಗೋವಿಂದ ಗೊಲ್ಲರಹಳ್ಳಿ 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವುದರ ಮೂಲಕ ರಾಣೇಬೆನ್ನೂರು ಇತಿಹಾಸದಲ್ಲಿಯೇ ಇಷ್ಟೊಂದು ಸಾಧನೆ ಮಾಡಿದ ಪ್ರಥಮ ವಿದ್ಯಾರ್ಥಿ ಎಂಬ ಖ್ಯಾತಿಗೆ ಪಾತ್ರನಾಗಿದ್ದಾನೆ.
ನಗರದ ಹೊರವಲಯದ ಅಡವಿ ಆಂಜನೇಯ ಬಡಾವಣೆಯ ನಿವಾಸಿ ಪೃಥ್ವಿಶ್ ಗೋವಿಂದ ಗೊಲ್ಲರಹಳ್ಳಿ ಎಂಬಾತನು ತಾಲೂಕಿನ ಮಾಕನೂರಿನ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಯಾಗಿದ್ದು, ಈ ವರ್ಷದ ಮಾರ್ಚ-ಎಪ್ರಿಲನಲ್ಲಿ ನಡೆದ ಪರೀಕ್ಷೆಯಲ್ಲಿ 625ಕ್ಕೆ 622 ಅಂಕಗಳನ್ನು ಪಡೆದಿದ್ದನು. ವಿಜ್ಞಾನ ವಿಷಯದಲ್ಲಿ 97 ಅಂಕಗಳನ್ನು ಅತನು ಪಡೆದಿದ್ದನು. ಆದರೆ ಆತನಿಗೆ ತೃಪ್ತಿ ಆಗದ ಕಾರಣ ಅವನು ಉತ್ತರ ಪತ್ರಿಕೆಯ ಮರು ಮೌಲ್ಯಮಾಪನ ಮಾಡಿಸಿದಾಗ ವಿಜ್ಞಾನದಲ್ಲಿಯೂ 100 ಅಂಕಗಳನ್ನು ಗಳಿಸಿ ಒಟ್ಟಾರೆ 625 ಅಂಕಗಳನ್ನು ಪಡೆದು ಇತಿಹಾಸ ನಿರ್ಮಿಸಿದ್ದಾನೆ.
ಅತಿ ಬಡತನಲ್ಲಿಯೇ ಬೆಳೆದು ಓದಲು ಆಗದೇ ನಗರದ ಶ್ರೀದೇವಿ ನವೋದಯ ಟ್ಯುಟೋರಿಯಲ್ ತರಬೇತುದಾರ ಎಂ.ಬಿ.ಬಡಿಗೇರ ಅವರಲ್ಲಿ ತರಬೇತಿ ಹೊಂದಿ ಮೊರಾರ್ಜಿ ಶಾಲೆಗೆ ಆಯ್ಕೆಯಾಗಿದ್ದನು. ತಾಯಿ ಮಮತಾಳು ನಗರದ ಲಯನ್ಸ ಶಾಲೆಯಲ್ಲಿ ಬಿಸಿಯೂಟದ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂದೆ ಇಲ್ಲಿನ ಬಹದ್ದೂರ್ ದೇಸಾಯಿ ಮೋಟಾರ್ಸ್ನಲ್ಲಿ ಸೆಕ್ಯೂರಿಟಿ ಗಾರ್ಡಾಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇನ್ನೊರ್ವಮಗಳು ಪಲ್ಲವಿ ಸದ್ಯ 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಗನನ್ನು ಓದಿಸಲಾಗದೆ ಪರಿತಪಿಸುತ್ತಿದ್ದ ಈ ದಂಪತಿಗಳಿಗೆ ಮುರಾರ್ಜಿ ವಸತಿ ಶಾಲೆ ಕೈ ಹಿಡಿಯಿತು.
ಸಾಧನೆ ಊಹಿಸಿರಲಿಲ್ಲ: ಮಗನ ಈ ಸಾಧನೆ ನಮಗೆ ನಿರೀಕ್ಷಿತ ಆಗಿದ್ದರೂ ಸಹ ಇಷ್ಟೊಂದು ಫಲಿತಾಂಶ ಬರುತ್ತದೆ ಎಂದು ಊಹಿಸಿರಲಿಲ್ಲ. ಆದರೆ ಆತನ ಜಾಣ್ಮೆಯ ಮೇಲೆ ನಮಗೆ ನಂಬಿಕೆ, ವಿಶ್ವಾಸವಿತ್ತು. ಇದೀಗ ಫಲಿತಾಂಶ ಬಹಳಷ್ಟು ಸಂತಸ ತಂದಿದೆ. ಮುಂದೆ ಐಎಎಸ್ ಓದುವ ಅಭಿಲಾಷೆ ಹೊಂದಿರುವ ಮಗನಿಗೆ ಸಮಾಜವೇ ಕೈಹಿಡಿಬೇಕಾಗಿದೆ ಎಂದು ತಾಯಿ ಮಮತಾ, ತಂದೆ ಗೋವಿಂದ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಯ ಮನದಾಳದ ಮಾತು: ನಾನು ಮುರಾರ್ಜಿ ಶಾಲೆಯಲ್ಲಿ ರಾತ್ರಿ 11ಕ್ಕೆ ಮಲಗುತ್ತಿದ್ದೆ ಬೆಳಗಿನ ಜಾವ 4.30ಕ್ಕೆ ಎದ್ದು ಮುಂಜಾನೆ ಏಳರವರೆಗೆ ಅಭ್ಯಾಸ ಮಾಡುತ್ತಿದ್ದೆ. ಜೊತೆಗೆ ಹೆಚ್ಚುವರಿ ಸಮಯವನ್ನು ಓದಲಿಕ್ಕಾಗಿ ಮೀಸಲಿಡುತ್ತಿದ್ದೆ. ದಿನಕ್ಕೆ 12 ಗಂಟೆಗಳ ಕಾಲ ಇಷ್ಟಪ್ಪಟ್ಟು ಓದುತ್ತಿದ್ದೆ. ಅನುಮಾನ ಬಂದರೆ ಶಿಕ್ಷಕರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳುತ್ತಿದ್ದೆ. ನನಗೆ ಪರೀಕ್ಷೆ ಬರೆದು ಉನ್ನತ ಶ್ರೇಣಿಯಲ್ಲಿ ಪಾಸ್ ಆಗುತ್ತೇನೆ ಎಂಬ ದೊಡ್ಡ ವಿಶ್ವಾಸ ನನಗಿತ್ತು.ಹಿಂದಿ ವಿಷಯದಲ್ಲಿ ಕೇವಲ ಎರಡು ತಾಸುಗಳಲ್ಲಿ ಉತ್ತರ ಪತ್ರಿಕೆ ಬರೆದು ಮುಗಿಸಿದ್ದೆ. ಉಳಿದ ವಿಷಯಗಳ ಉತ್ತರ ಪತ್ರಿಕೆಗಳನ್ನು ನಿಗದಿತ ಸಮಯಕ್ಕಿಂತ 10-15 ನಿಮಿಷ ಮುಂಚಿತವಾಗಿ ಮುಗಿಸುತ್ತಿದ್ದೆ. ಹೆಚ್ಚಿನ ಪರಿಶ್ರಮದಿಂದ ನನಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು. ಇದೀಗ ಮೂಡಬಿದಿರೆಯ ಅಳ್ವಾ ಕಾಲೇಜಿಗೆ ವಿಜ್ಞಾನ ವಿಭಾಗಕ್ಕೆ ಸೇರಿರುವೆ. ಮುಂದೆ ಐಎಎಸ್ ಓದುವ ಆಸೆ ನನಗಿದೆ . ಹೇಗಾದರೂ ಮಾಡಿ ಆ ಕನಸನ್ನು ನನಸು ಮಾಡಲು ಈಗಿನಿಂದಲೇ ಪ್ರಯತ್ನಿಸುವೆ ಎಂದು ಪೃಥ್ವಿಶ್ ತನ್ನ ಮನದಾಳದ ಮಾತುಗಳನ್ನು ತಿಳಿಸಿದನು.
ಒಟ್ಟಾರೆ ಪೃಥ್ವಿಶ್‌ನ ಸಾಧನೆಗೆ ಇಡೀ ತಾಲೂಕ್ ಅಭಿನಂದಿಸುವಂತೆ ಆಗಿದೆ. ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತಾಲೂಕಿನ, ಜಿಲ್ಲೆಯ ಕೀರ್ತಿ ಸಂಪಾದಿಸಿದ ಆತನಿಗೆ ಸಮಸ್ತ ತಾಲೂಕಿನ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಬೇಕಾಗಿದೆ. ಈತನ ಮುಂದಿನ ವಿದ್ಯಾಭ್ಯಾಸ ಯಶಸ್ವಿಯಾಗಲಿ, ಜೀವನದಲ್ಲಿ ಉನ್ನತ ಸ್ಥಾನ ಪಡೆಯಲಿ ಎಂಬುದೇ ಜನರ ಆಶಯವಾಗಿದೆ.
ಶಾಸಕ ಪ್ರಕಾಶ ಕೋಳಿವಾಡ ಪೃಥ್ವಿಶ್ ಮನೆಗೆ ತೆರಳಿ ಆತನಿಗೂ ಹಾಗೂ ಆತನ ತಂದೆ ತಾಯಿಗಳಿಗೆ ಅಭಿನಂದನೆ ಸಲ್ಲಿಸಿದರಲ್ಲದೆ ಒಂದು ಲ್ಯಾಪ್ಟಾಪ್ ನೀಡಿ ಪ್ರೋತ್ಸಾಹಗೈದರು. ನಂತರ ಸಮಾಜದ ಅನೇಕರು ಅಭಿನಂದನೆ ಸಲ್ಲಿಸಿ ಮುಂದಿನ ಶೈಕ್ಷಣಿಕವಾಗಿ ಬೆಳೆಯಲಿ ಎಂದು ಹಾರೈಸಿದರು.