ನಮ್ಮ ದೈನಂದಿನ ಬದುಕಿಗೆ ಆರ್ಥಿಕ ಚಟುವಟಿಕೆಗಳು ಅವಶ್ಯ. ಹಣ ಗಳಿಸುವುದನ್ನು, ಸಂಪಾದಿಸುವುದನ್ನು ಎಲ್ಲ ಧರ್ಮಗಳೂ ಸಮ್ಮತಿಸಿವೆ. ಆದರೆ ಈ ಚಟುವಟಿಕೆಗಳು ಧರ್ಮಬಾಹಿರವಾಗಿ ಇರಬಾರದೆಂಬ ಎಚ್ಚರಿಕೆಯನ್ನೂ ನೀಡಿವೆ. ನಮಗಾಗಿ ಗಳಿಕೆ ಇರಬೇಕು, ಗಳಿಕೆಗಾಗಿ ನಾವು ಇರಬಾರದು' ಎಂಬ ಉಪದೇಶವನ್ನು ಅನೇಕ ಬಾರಿ ಕೇಳಿದ್ದೇವೆ. ಹಣ, ಸಂಪತ್ತು ಇವು ನಮ್ಮ ಜೀವನದಲ್ಲಿ ಯಾವ ಪಾತ್ರ ವಹಿಸುತ್ತವೆ? ನಾವು ನಿಜವಾಗಿಯೂ ಏಕೆ ಹಣವನ್ನು ಗಳಿಸಬೇಕು ಎಂಬುದರ ವಿವೇಚನೆ ನಮಗೆ ಇರುವುದು ತೀರ ವಿರಳ. ಆಹಾರ, ಬಟ್ಟೆ, ವಸತಿ ಇತ್ಯಾದಿ ಕಾರಣಗಳಿಗಾಗಿ ಖರ್ಚು ಮಾಡಲು ನಮಗೆ ಹಣ ಬೇಕು. ಅದಕ್ಕಾಗಿ ನಾವು ಹಣ ಗಳಿಸಬೇಕು. ಆದರೆ ಮನುಷ್ಯ ಆಂತರಿಕವಾಗಿ ನೆಮ್ಮದಿಯ ಹಲವು ಆವಶ್ಯಕತೆಗಳಿಗೆ ಓಗೊಡಬೇಕಾಗುತ್ತದೆ. ಈ ಆಂತರಿಕ ಹಾಗೂ ಬಾಹ್ಯ ಆವಶ್ಯಕತೆಗಳ ಸಮತೋಲನ ಮಾಡುವುದೇ ಗಳಿಕೆಯ ಉದ್ದೇಶವಾಗಿರಬೇಕು.
ಗಳಿಕೆ ದೇವರ ಅಸಂಖ್ಯಾತ ಕಾಣಿಕೆಗಳಲ್ಲಿ ಒಂದು’ ಎಂದು ಕುರಾನ್ ಹೇಳುತ್ತದೆ. ಖೈರ ಎಂಬ ವಚನದಲ್ಲಿ ವಿಶ್ಲೇಷಿಸಲಾಗಿದೆ (೨:೨೧೫-೧೮೦). ಇದನ್ನು ಲೌಕಿಕ ಜೀವನದ ಆಕರ್ಷಣೆಯನ್ನಾಗಿಯೂ ಉಲ್ಲೇಖಿಸಲಾಗಿದೆ.
ಇಸ್ಲಾಮಿನಲ್ಲಿ ಸಂಪತ್ತನ್ನು ಗಳಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಪ್ರವಾದಿವರ್ಯ ಮುಹಮ್ಮದ (ಸ) ಹೇಳುತ್ತಾರೆ, `ಕಾನೂನುಬದ್ಧ ಗಳಿಕೆಯನ್ನು ಹುಡುಕುವುದು ಕಡ್ಡಾಯವಾಗಿದೆ’ ಎಂದು. ಕೇವಲ ಆದಾಯಕ್ಕಾಗಿ ದೇವರನ್ನು ಪ್ರಾರ್ಥಿಸುವ ವ್ಯಕ್ತಿಯನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಮನುಷ್ಯನು ಶ್ರಮವಿಲ್ಲದೆ ಯಾವುದನ್ನೂ ಪಡೆಯುವುದಿಲ್ಲ. ಅವನ ಪರಿಶ್ರಮದಿಂದ ಅವನಿಗೆ ಪೂರ್ಣ ಪ್ರತಿಫಲ ದೊರೆಯುತ್ತದೆ (೫೩:೩೯,೪೧).
ಕಠಿಣ ಪರಿಶ್ರಮದ ಮೂಲಕ ಹಣ ಗಳಿಸುವುದಕ್ಕೆ ಇಸ್ಲಾಂ ನೀಡುವ ಪ್ರಾಮುಖ್ಯತೆಯ ಜೊತೆಗೆ ಕಾನೂನುಬದ್ಧ ಮಾರ್ಗಗಳ ಮೂಲಕ ಗಳಿಸಲು ಹೆಚ್ಚಿನ ಒತ್ತು ನೀಡುತ್ತದೆ. ನ್ಯಾಯಯುತ ವಿಧಾನಗಳ ಮೂಲಕ ಜೀವನೋಪಾಯವನ್ನು ನಡೆಸಲು ಸಲಹೆ ನೀಡಲಾಗಿದೆ. ಕಳ್ಳತನ, ಮೋಸ, ಜೂಜು ಇತ್ಯಾದಿಗಳ ಮೂಲಕ ಅಲ್ಲ. ಇಂತಹ ಮಾರ್ಗಗಳಿಂದ ಗಳಿಸಿದ ಸಂಪತ್ತು ಹರಾಮ ಎನಿಸಿಕೊಳ್ಳುತ್ತದೆ.
ಗಳಿಕೆ, ಸಂಪಾದನೆಗಳ ಕುರಿತು ಒಮ್ಮೆ ಯೋಚಿಸಿದಾಗ ಇವು ಕಠಿಣ ಪರಿಶ್ರಮದಿಂದ ಆಗಿದೆಯೋ ಅಥವಾ ಅಕ್ರಮವಾಗಿ ಆಗಿದೆಯೋ ಎಂಬುದನ್ನು ನಮ್ಮ ಆತ್ಮ ಹೇಳುತ್ತದೆ. ಆಗ ಕಠಿಣ ಪರಿಶ್ರಮದ ಗಳಿಕೆಗಾಗಿ ನೆಮ್ಮದಿ ಅನುಭವಿಸಿದರೆ, ಅಕ್ರಮ ಸಂಪಾದನೆಗಾಗಿ ಆತ್ಮವಂಚನೆಗೆ ಒಳಗಾಗಿ ಪಶ್ಚಾತ್ತಾಪಪಡುತ್ತದೆ.