ಚಿತ್ರದುರ್ಗ: ಒಳಮೀಸಲಾತಿ ಜಾರಿಗೊಳ್ಳುವವರೆಗೂ ಬಡ್ತಿ, ಉದ್ಯೋಗ, ಬ್ಯಾಕ್‌ಲಾಗ್ ನೇಮಕಾತಿಗೆ ತಡೆಗೆ ಆಗ್ರಹಿಸಿ ಮಲ ಸುರಿದುಕೊಳ್ಳುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸೇರಿ ದಲಿತ ಸಚಿವರು ಈ ಸಂಬಂಧ ಮಾತು ಕೊಟ್ಟಿದ್ದರು. ಆದರೆ, ಹೆಚ್.ಸಿ. ಮಹಾದೇವಪ್ಪ ಬಡ್ತಿ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿಯುತವಾಗಿ ನಡೆಯುತ್ತಿದ್ದ ನಮ್ಮ ಕ್ರಾಂತಿಕಾರಿ ಯಾತ್ರೆ ಇನ್ಮುಂದೆ ಉಗ್ರಸ್ವರೂಪಕ್ಕೆ ತಿರುಗಲಿದೆ. ಚಿತ್ರದುರ್ಗದಲ್ಲಿಯೇ ರಥಯಾತ್ರೆ ರದ್ದುಗೊಳಿಸಿ, ಮೈಸೂರಿನಲ್ಲಿ ಮೇ 24ಕ್ಕೆ ಅರೆಬೆತ್ತಲೆ ಪಾದಯಾತ್ರೆ ಆರಂಭಿಸಿ, ಜೂನ್ 9ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದರು.
ಮೇ 25ರಂದು ಮೈಸೂರು ಡಿಸಿ ಕಚೇರಿ ಬಳಿ ಮಲ ಸುರಿದುಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸುತ್ತೇವೆ. ಪ್ರತಿದಿನ ನಮ್ಮನ್ನು ನಾವು ಅವಮಾನಿಸಿಕೊಂಡು, ದಂಡಿಸಿಕೊಂಡು ಬೇಡಿಕೆ ಈಡೇರಿಕೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಲಿದ್ದೇವೆ ಎಂದರು.