ಎಸ್ಸಿಗಳ ಅನ್ನಕ್ಕೆ ಜಂಗಮರು ಕನ್ನ

ಚಿತ್ರದುರ್ಗ: ರಾಜ್ಯದ ಯಾವುದೇ ಮೂಲೆಯಲ್ಲಿ ಬೇಡ ಜಂಗಮರು ಇಲ್ಲ, ಆದರೂ ಲಿಂಗಾಯಿ ತರು, ಹಿಂದುಳಿದವರು ಸೇರಿ ನಮ್ಮೆಲ್ಲರ ಪಾಲಿಗೆ ಗುರು ಸ್ಥಾನದಲ್ಲಿರುವ ವೀರಶೈವ ಜಂಗಮರು ಬೇಡ ಜಂಗಮರು ನಾವೆಂದು ಸುಳ್ಳು ದಾಖಲು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಆರೋಪಿಸಿದರು.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಧ್ರ ಮೂಲದಿಂದ ರಾಜ್ಯಕ್ಕೆ ವಲಸೆ ಬಂದಿದ್ದ ಬೇಡಜಂಗಮರ ಭಾಷೆ ತೆಲುಗು, ಸತ್ತ ಹಂದಿ-ದನದ ಮಾಂಸ ಅವರ ಆಹಾರ. ಹೊಟ್ಟೆ ತುಂಬಾ ಮದ್ಯ ಸೇವಿಸುವ ಜನರು. ಮಾದಿಗರ ಬಳಿ ಬೇಡಿಕೊಂಡು ಬದುಕು ನಡೆಸುತ್ತಿದ್ದ ವರ್ಗ. ಈ ಜಾತಿ ಜನರು ರಾಜ್ಯದಲ್ಲಿ ನಶಿಸಿದೆ ಎಂದರು.
ಎಸ್ಸಿ ಪಟ್ಟಿಯಲ್ಲಿನ ೧೦೧ ಜಾತಿಗಳಲ್ಲಿ ಬೇಡ ಜಂಗಮರು ಒಂದಾಗಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ಪರಿಶಿಷ್ಟರ ತಟ್ಟೆಯಲ್ಲಿನ ಅನ್ನಕ್ಕೆ ಕನ್ನ ಹಾಕುವ ಕೆಲಸ ವೀರಶೈವರಲ್ಲಿನ ಕೆಲವರು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ವೇಳೆ ಬಹಳಷ್ಟು ಮಂದಿ ನಾವು ಬೇಡಜಂಗಮರು ಎಂದು ಬರೆಸು ತ್ತಿದ್ದು, ಅಂತಹವರ ವಿರುದ್ಧ ನ್ಯಾ.ನಾಗಮೋಹನ್ ದಾಸ್ ಆಯೋಗ ಕ್ರಮ ಕೈಗೊಳ್ಳಬೇಕು. ಜೊತೆಗೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ವಿತರಿಸುವ ತಹಶೀಲ್ದಾರ್‌ಗಳನ್ನು ಜೈಲಿಗೆ ಹಾಕಬೇಕೆಂದು ಆಗ್ರಹಿಸಿದರು.
ಬೇಡಜಂಗಮ ಪದವನ್ನೇ ಎಸ್ಸಿ ಪಟ್ಟಿಯಿಂದ ಕೈಬಿಡಲು ಮುಖ್ಯಮಂತ್ರಿಯವರು ಮುಂದಾಗಬೇಕು. ಈ ಕಾರ್ಯಕ್ಕೆ ಎಲ್ಲ ಪಕ್ಷಗಳು ಕೈಜೋಡಿಸಬೇಕು ಎಂದು ಕೋರಿದರು.
ಒಳಮೀಸಲಾತಿ ಜಾರಿಗೊಳ್ಳುವವರೆಗೂ ಸರ್ಕಾರಿ ಉದ್ಯೋಗ ನೇಮಕಾತಿಗೆ ತಡೆವೊಡ್ಡಲಾಗಿದೆ. ಇದೇ ರೀತಿ ಬ್ಯಾಕ್‌ಲಾಗ್ ಹುದ್ದೆ ಭರ್ತಿ ಮಾಡುತ್ತಿಲ್ಲ. ಒಂದೊಮ್ಮೆ ಮುಂದಾದರೆ ಅಧಿಕಾರಿಗಳ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಾತಿಗಣತಿ ಸಮೀಕ್ಷೆ ಕಾರ್ಯ ಆರಂಭದಲ್ಲಿ ಕುಂಟುತ್ತಾ ಸಾಗುತ್ತಿತ್ತು. ಈಗ ಸರಿದಾರಿಗೆ ಬಂದಿದೆ. ಏನಾದರೂ ಲೋಪ ಕಂಡುಬಂದಲ್ಲಿ ಆಯೋಗಕ್ಕೆ ದೂರು ನೀಡುತ್ತಿದ್ದು, ಅವರ ತಕ್ಷಣ ಸರಿಪಡಿಸುತ್ತಿದ್ದಾರೆ ಎಂದರು.