ಭಾರತದಿಂದ ಹೊರಬರುವಂತೆ ಆ್ಯಪಲ್‌ಗೆ ಟ್ರಂಪ್ ಸೂಚನೆ

ದೋಹಾ: ಚೀನಾ ಬದಲಿಗೆ ಭಾರತದಲ್ಲಿ ಆಪಲ್ ಐಫೋನ್ ಉತ್ಪಾದನೆ ಹೆಚ್ಚಿಸುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಕದನ ವಿರಾಮಕ್ಕೆ ಅಮೆರಿಕ ಕಾರಣವಲ್ಲ ಹಾಗೂ ಕಾಶ್ಮೀರ ವಿಷಯದಲ್ಲಿ ಯಾರ ಮಧ್ಯಸ್ಥಿಕೆಯೂ ನಮಗೆ ಬೇಕಾಗಿಲ್ಲ ಎಂದು ಹೇಳಿದ್ದ ಭಾರತದ ವಿರುದ್ಧ ಟ್ರಂಪ್ ತಿರುಗಿ ಬಿದ್ದರಾ ಎಂಬ ಪ್ರಶ್ನೆ ಎದ್ದಿದೆ.
ಟ್ರಂಪ್ ಅವರು ಆ್ಯಪಲ್ ಸಿಇಒ ಟಿಮ್ ಕುಕ್ ಜೊತೆ ಮಾತನಾಡಿದ ಸಂದರ್ಭದಲ್ಲಿ ನೀವು ಭಾರತದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ನನಗೆ ಒಂದಿನಿತೂ ಇಷ್ಟವಿಲ್ಲ ಎಂದಿದ್ದಾರಂತೆ. ನೀವು ಭಾರತ ಬಗ್ಗೆ ಆಸಕ್ತಿ ವಹಿಸುವುದಿದ್ದರೆ ನಮ್ಮಿಂದೇನೂ ಅಭ್ಯಂತರ ಇಲ್ಲ. ಆದರೆ ಭಾರತವು ಜಗತ್ತಿನಲ್ಲೇ ಅತಿಹೆಚ್ಚು ತೆರಿಗೆ ವಿಧಿಸುವ ದೇಶವಾಗಿದ್ದು ಅಲ್ಲಿ ಮಾರಾಟ ಮಾಡುವುದು ಬಹಳ ಕಷ್ಟ ಎಂದೂ ಟ್ರಂಪ್ ವಿವರಿಸಿದ್ದಾರೆ. ಹಾಗೆಯೇ ಭಾರತದ ಬದಲಿಗೆ ಅಮೆರಿಕದಲ್ಲೇ ಆಪಲ್ ಐಫೋನ್ ಉತ್ಪಾದಿಸುವಂತೆ ಕುಕ್‌ಗೆ ಸೂಚಿಸಿದ್ದಾರೆ.
ಹಾಗಿದ್ದರೂ ಭಾರತದೊಂದಿಗೆ ಅಮೆರಿಕ ವ್ಯಾಪಾರ ಮಾತುಕತೆ ನಡೆಸಿ, ಅಮೆರಿಕದ ಯಾವುದೇ ವಸ್ತು ಮೇಲೂ ಸುಂಕ ವಿಧಿಸದಿರುವ ಕುರಿತು ಒಪ್ಪಂದ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಆಪಲ್ ಉದ್ದೇಶವೇನು?: ಅಮೆರಿಕ-ಚೀನಾ ಮಧ್ಯೆ ತೆರಿಗೆ ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಮಾರಾಟವಾಗುವ ಆಪಲ್ ಫೋನ್‌ಗಳನ್ನು ಭಾರತದಲ್ಲಿ ತಯಾರಿಸಲು ಆಪಲ್ ಕಂಪನಿ ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ೫೦೦ ಬಿಲಿಯ ಡಾಲರ್ ಬಂಡವಾಳ ಹೂಡಿ ಇನ್ನೆರಡು ಕಾರ್ಖಾನೆಗಳನ್ನು ನಿರ್ಮಿಸಲು ಈ ಕಂಪನಿ ಮುಂದಾಗಿದೆ. ಈಗಾಗಲೇ ಆಪ್ ಭಾರತದಲ್ಲಿ ಮೂರು ಕಾರ್ಖಾನೆಗಳನ್ನು ಹೊಂದಿದ್ದು ಅವುಗಳಲ್ಲಿ ಎರಡು ತಮಿಳುನಾಡಿನಲ್ಲಿದ್ದರೆ ಇನ್ನೊಂದು ಕರ್ನಾಟಕದಲ್ಲಿದೆ.
ಪ್ರಸ್ತುತ ಆಪಲ್ ಕಂಪನಿಯು ಅಮೆರಿಕದಲ್ಲಿ ೬ ಕೋಟಿ ಐಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಐಫೋನ್‌ಗಳಲ್ಲಿ ಶೇ. ೮೦ರಷ್ಟು ಭಾಗವನ್ನು ಚೀನಾದಲ್ಲಿ ಉತ್ಪಾದಿಸುತ್ತಿದೆ. ಇನ್ನು ಭಾರತದಲ್ಲಿ ಐಫೋನ್‌ಗಳನ್ನು ಉತ್ಪಾದಿಸುವುದಿದ್ದರೆ ಅದರ ಉತ್ಪಾದನಾ ವೆಚ್ಚವು ಚೀನಾಕ್ಕಿಂತಲೂ ಶೇ. ೫ರಿಂದ ಎಂಟರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಸಂದರ್ಭಗಳಲ್ಲಿ ಈ ವೆಚ್ಚವು ಶೇ. ೧೦ಕ್ಕೂ ಹೆಚ್ಚಬಹುದು.