ದಾರ್ಶನಿಕರು ಮೂರು ಹಂತಗಳಲ್ಲಿ ಯಶಸ್ವಿ ಜೀವನ ಸಾಗಿಸಲು ಹೇಳುತ್ತಾರೆ. ಆತ್ಮಾವಲೋಕನ ಮಾಡಿಕೊಳ್ಳುವುದು, ತಪ್ಪುಗಳನ್ನು ತಿದ್ದುಪಡಿ ಮಾಕೊಳ್ಳುವುದು ಹಾಗೂ ಒಪ್ಪಿಕೊಂಡಿದ್ದನ್ನು ಸ್ವೀಕರಿಸುವುದು.
ಮೊದಲು ನಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಅವುಗಳನ್ನು ಸ್ವೀಕರಿಸಿ, ನಂತರ ಅವುಗಳನ್ನು ಸರಿಪಡಿಸಿಕೊಳ್ಳಲು ಆತ್ಮಾವಲೋಕನದಲ್ಲಿ ತೊಡಗಬೇಕು. ಅಂದರೆ ತಪ್ಪು ಮಾಡಿದಾಗಲೊಮ್ಮೆ ಸರಿಯಾದ ಕರ‍್ಯವನ್ನು ಮಾಡಲು ಪ್ರಯತ್ನಿಸಬೇಕು. ಈ ಅಭ್ಯಾಸವು ನಮ್ಮನ್ನು ನಮ್ಮ ತಪ್ಪು ಹಾಗೂ ದುಷ್ಕೃತ್ಯಗಳ ಪರಿಣಾಮದಿಂದ ರಕ್ಷಿಸುತ್ತದೆ.
`ಪುಣ್ಯಕರ‍್ಯಗಳು, ಪಾಪಕರ‍್ಯಗಳನ್ನು ದೂರೀಕರಿಸುತ್ತವೆ. ಎಲ್ಲೆಡೆ ಹಬ್ಬಿರುವ ಕೆಡಕುಗಳನ್ನು ಹಾಗೂ ನಿಮ್ಮ ಮೇಲಾಗುತ್ತಿರುವ ಅನ್ಯಾಯ, ದೌರ್ಜನ್ಯಗಳನ್ನು ನಿವಾರಿಸಲು ನೀವು ಶಾಂತಿ, ಸಮಾಧಾನ, ತಾಳ್ಮೆಯಿಂದ ವರ್ತಿಸುವುದೇ ಒಳ್ಳೆಯ ಕ್ರಮ. ನೀವು ನಿಮ್ಮ ಸದ್ವರ್ತನೆಯ ಮೂಲಕ ಅವರ ದುರ್ವರ್ತನೆಯನ್ನು ಸೋಲಿಸಬೇಕು. ಇದಕ್ಕೆ ಒಳ್ಳೆಯವರಾಗಲು ದೇವರ ಪ್ರಾರ್ಥನೆ ಅತ್ಯುತ್ತಮ ಸಾಧನ. ಇದರ ಮೂಲಕ ನೀವು ಕೆಡಕುಗಳನ್ನು ಉಚ್ಚಾಟಿಸಿ ಶಾಂತಿ ಸಮಾಧಾನಗಳನ್ನು ನೆಲೆಗೊಳಿಸಬಲ್ಲಿರಿ’ ಎಂದು ಕುರಾನಿನ ಅಧ್ಯಾಯವೊಂದರಲ್ಲಿ (ಹುದ್ ೧೧.೧೧೪) ಸೇರಿದಂತೆ ಕುರಾನಿನ ಅನೇಕ ಕಡೆ ಉಪದೇಶ, ಆದೇಶಗಳಿವೆ.
ತಪ್ಪು ಮಾಡುವುದು ಮಾನವನ ಸಹಜ ಗುಣ. ಮನುಷ್ಯ ಪ್ರಲೋಭನೆಗಳಿಗೆ ಒಳಗಾಗಿ ತಪ್ಪುಗಳನ್ನು ಮಾಡುತ್ತಾನೆ. ಸಾಮಾನ್ಯವಾಗಿ ತಪ್ಪು ಆಯ್ಕೆಗಳನ್ನು ಮಾಡುವುದರಿಂದ ಹೀಗಾಗುವುದು. ಹಾಗಾದರೆ ಆತ್ಮಾವಲೋಕನೆಗೆ ಯಾವ ಮಾರ್ಗವಿದೆ?
ಕೆಟ್ಟ ಕರ‍್ಯಗಳು ಬೇರೆಬೇರೆ ರೂಪ-ವಿಧಗಳಲ್ಲಿ ಇರುತ್ತವೆ. ಆದರೆ ನಾವು ಯಾವುದೇ ರೀತಿಯ ಕೆಟ್ಟ ಕಾರ‍್ಯ ಮಾಡಿದರೂ ಅದರ ನಂತರ ಪಶ್ಚಾತ್ತಾಪಪಡಬೇಕು. ಒಳ್ಳೆಯ ಕಾರ್ಯಗಳನ್ನು ಮಾಡುವ ಮೂಲಕ ಕೆಟ್ಟ ಕಾರ‍್ಯಗಳ ಪರಿಣಾಮಗಳನ್ನು ಅಳಿಸಿಹಾಕಲು ಪ್ರಯತ್ನಿಸಬೇಕು. ನಮ್ಮ ಕೋಪದಿಂದ ನಾವು ಯಾರನ್ನಾದರೂ ನಿಂದಿಸಿದರೆ ಸಾರ್ವಜನಿಕವಾಗಿ ಅವರಲ್ಲಿ ಕ್ಷಮೆ ಯಾಚಿಸಬೇಕು ಮತ್ತು ಅವರಿಗಾಗಿ ಪ್ರಾರ್ಥಿಸಬೇಕು. ಯಾರಿಗಾದರೂ ದೈಹಿಕವಾಗಿ ಹಾನಿ ಮಾಡಿದರೆ ಹಣ ಅಥವಾ ಇತರ ಸಹಾಯಗಳ ಮೂಲಕ ಹಾನಿಯನ್ನು ಸರಿಪಡಿಸಬಹುದು.
ತಪ್ಪಿನ ತಿದ್ದುಪಡಿ ಅಂದರೆ ಕೆಟ್ಟ ಕಾರ‍್ಯ ಮಾಡಿದಾಗ ಒಳ್ಳೆಯ ಕರ‍್ಯ ಮಾಡುವುದು. ಕುರಾನಿನ ಇನ್ನೂ ಹಲವು ಉಪದೇಶಗಳಲ್ಲಿ, ತಪ್ಪೊಂದು ತಾತ್ಕಾಲಿಕ ಪರಿಣಾಮ ಹೊಂದಿದರೆ ಅದನ್ನು ಕ್ಷಮಿಸಬಹುದು. ನಾವು ಮಾಡುವ ಪ್ರತಿಯೊಂದು ಕೆಟ್ಟ ಕಾರ‍್ಯವೂ ನಮ್ಮ ಆತ್ಮವನ್ನು ಕಲುಷಿತಗೊಳಿಸುತ್ತದೆ. ನಂತರ ಅದನ್ನು ನಾವು ಕಣ್ಣೀರಿನಿಂದ ಅಥವಾ ಯಾವುದೇ ರೀತಿಯ ಪಶ್ಚಾತ್ತಾಪದ ನಡವಳಿಕೆಯಿಂದ ಶುದ್ಧೀಕರಿಸಬೇಕು. ಶುದ್ಧೀಕರಿಸುವುದರಲ್ಲಿ ವಿಫಲರಾಗಬೇಡಿ ಎಂದು ವಿದ್ವಾಂಸರು ಎಚ್ಚರಿಸಿದ್ದಾರೆ. ತಪ್ಪು, ಕೆಟ್ಟ ಕರ‍್ಯಗಳ ಬಗ್ಗೆ ನಮ್ಮ ಆಲೋಚನಾ ವಿಧಾನವನ್ನು ಬದಲಿಸಿ, ತಪ್ಪನ್ನು ಒಪ್ಪಿ ಸ್ವೀಕರಿಸಿ ಅದನ್ನು ತಿದ್ದುವ ಪ್ರಯತ್ನ ಮಾಡಿದಾಗ ಯಶಸ್ವಿ ಜೀವನ ಸಾಧ್ಯ.