ಹುಬ್ಬಳ್ಳಿ: ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರ ಸಂಘಟನೆಗಳ 9 ಶಿಬಿರಗಳ ಮೇಲೆ ಕಳೆದ ರಾತ್ರೋ ರಾತ್ರಿ ನಡೆಸಿದ ಕ್ಷಿಪಣಿ ದಾಳಿಯ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ರಾತ್ರಿಯಿಡೀ ನಿಗಾ ಇಟ್ಟಿದ್ದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ತಿಳಿಸಿದೆ.
ಪ್ರಧಾನಿ ಮೋದಿಯವರು ದಾಳಿಯ ಕುರಿತು ಇಂಚಿಂಚೂ ಮಾಹಿತಿಯನ್ನು ಪಡೆದಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥರು, ಹಿರಿಯ ಗುಪ್ತಚರ ಅಧಿಕಾರಿಗಳು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಬಾಲ್ ಪ್ರಧಾನಿಗೆ ನಿರಂತರವಾಗಿ ಮಾಹಿತಿ ನೀಡಿದ್ದಾರೆ. ಮಂಗಳವಾರ ರಾತ್ರಿ ಪ್ರಾರಂಭವಾಗಿ ಬುಧವಾರದ ಬೆಳಗಿನ ಜಾವದವರೆಗೂ ಪ್ರಧಾನಿ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ನಡುವೆ ಸಂವಹನ ನಡೆದಿದೆ.
26 ಜನರ ಭೀಕರ ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ, ಇದರಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಭದ್ರಕೋಟೆಯಾಗಿರುವ ಬಹಾವಲ್ಪುರ್ ಸೇರಿದೆ.