ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಕೋಮು ಗಲಭೆ ಆರಂಭವಾಗಿವೆ. ಸುಹಾಸ್ ಶೆಟ್ಟಿ ಕೊಲೆಯೇ ಇದಕ್ಕೆ ಉದಾಹರಣೆಯಾಗಿದೆ. ಈ ಕೊಲೆ ಕೃತ್ಯವನ್ನೂ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಆರೋಪಿಸಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಆಡಳಿತ ವ್ಯವಸ್ಥೆ ಹಾಳಾಗಿದೆ. ಸಿದ್ದರಾಮಯ್ಯ ಅವರು ಸಂಪೂರ್ಣ ವಿಫಲರಾಗಿದ್ದಾರೆ. ಮುಸ್ಲಿಂ ತುಷ್ಟೀಕರಣ ಹೆಚ್ಚಾದ ಕಾರಣ ಹಾಡುಹಗಲೇ ಕೊಲೆ ಸುಲಿಗೆ ಆರಂಭವಾಗಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ನಾವು ಏನು ಮಾಡಿದರೂ ನಡೆಯುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ ಕೇಂದ್ರ ತನಿಖಾ ದಳಕ್ಕೆ ವಹಿಸಬೇಕು. ಅಂದಾಗ ಮಾತ್ರ ಅವರ ಕುಟುಂಬಕ್ಕೆ ನ್ಯಾಯ ಸಿಗಲು ಸಾಧ್ಯ. ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್ ಎಂಬ ಸಿಎಂ ಹೇಳಿಕೆ ಬೇಜವಾಬ್ದಾರಿತಯುತವಾದ ಹೇಳಿಕೆಯಾಗಿದೆ ಎಂದರು.
ಪಿಎಫ್‌ಐ ಮೇಲಿನ ಕೇಸ್, ಮಂಗಳೂರು, ಬೆಂಗಳೂರು, ಶಿವಮೊಗ್ಗ, ಮೈಸೂರು, ಹಳೆ ಹುಬ್ಬಳ್ಳಿ ಗಲಭೆ, ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಮುಂತಾದ ಕಡೆಗಳಲ್ಲಿ ಹಾಕಿದ ಕೇಸ್ ವಾಪಸು ಪಡೆದರು. ಹಳೇ ಹುಬ್ಬಳ್ಳಿಯ ಅಂದಿನ ಪ್ರಕರಣವನ್ನು ಕಾನೂನು ಬಾಹಿರವಾಗಿ ವಾಪಸ್ ಪಡೆದರು. ರಾಜ್ಯ ಸರ್ಕಾರಕ್ಕೆ ನಾಚಿಕೆ ಇಲ್ಲ/ ಇದೊಂದು ಮಾನ ಮರ್ಯಾದೆ ಇಲ್ಲದ ಸರ್ಕಾರ ಎಂದು ಕಿಡಿಕಾರಿದರು.