ದೇಶದ ಐಕ್ಯತೆಗೆ ಮೋದಿ ನಿರ್ಧಾರಕ್ಕೆ ಬೆಂಬಲ

ಕಲಬುರಗಿ: ದೇಶದ ಐಕ್ಯತೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಏನೇ ನಿರ್ಧಾರಗಳನ್ನು ಅಥವಾ ಕ್ರಮಗಳನ್ನು ಕೈಗೊಂಡರೂ ಅದಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಪಹಲ್ಗಾಮ್ ಉಗ್ರ ದಾಳಿ ವಿಚಾರವಾಗಿ ಮಾತನಾಡಿದ ಅವರು, ದೇಶಕ್ಕಾಗಿ ಏನೇ ನಿರ್ಧಾರ ಕೈಗೊಂಡರು ಬೆಂಬಲಿಸುತ್ತೇವೆ. ಆದರೆ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು ಎಂದರು.
ಕೇವಲ ಭಾಷಣ ಮಾಡಿಕೊಂಡು ಕುಳಿತುಕೊಂಡರೆ ಸಾಲದು. ನಮ್ಮ ದೇಶದವರನ್ನು ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು. ಈ ವಿಚಾರದಲ್ಲಿ ರಾಜಕೀಯ ಆಗಬಾರದು. ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಈಗ ಅವರೇ, ಜಾತಿ ಜನಗಣತಿ ಮಾಡಲು ಹೊರಟಿದ್ದಾರೆ. ಬಿಹಾರ ಚುನಾವಣೆ ಗಿಮಿಕ್ ಇರಬಹುದು. ಆ ಕುರಿತು ಮಾತನಾಡುವುದಿಲ್ಲ. ದುರುದ್ದೇಶದಿಂದ ನಡೆದುಕೊಂಡರೆ ಯಾರೂ ಸಹಿಸುವುದಿಲ್ಲ ಎಂದರು.
ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದೇವೆ. ನಮಗೆ ದೇಶ ಮುಖ್ಯ. ಯಾವುದೇ ಕ್ರಮ ಕೈಗೊಂಡರೂ ಬೆಂಬಲ ಇದ್ದೇ ಇರುತ್ತದೆ ಸ್ಪಷ್ಟಪಡಿಸಿದರು.
ದೇಶದ ಏಕತೆ, ಸಮಗ್ರತೆ ಮತ್ತು ಸಮೃದ್ಧಿಯ ವಿರುದ್ಧದ ಯಾವುದೇ ಬೆದರಿಕೆಗೆ ನಾವು ಒಗ್ಗಟ್ಟಿನಿಂದ ಮತ್ತು ದೃಢವಾಗಿ ಪ್ರತಿಕ್ರಿಯಿಸುತ್ತೇವೆ. ಈ ವಿಷಯದಲ್ಲಿ ಇಡೀ ವಿರೋಧ ಪಕ್ಷವು ಸರ್ಕಾರದ ಜೊತೆ ನಿಂತಿದೆ. ನಾವು ಈ ಸಂದೇಶವನ್ನು ಇಡೀ ಜಗತ್ತಿಗೆ ಕಳುಹಿಸಿದ್ದೇವೆ ಎಂದು ಖರ್ಗೆ ಹೇಳಿದರು.