ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ
ಬೆಂಗಳೂರು: ಕೆಪಿಎಸ್‌ಸಿ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಲೇರಿದ್ದ ಅಭ್ಯರ್ಥಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕೆಪಿಎಸ್ಸಿ ಪೂರ್ವಭಾವಿ ಪರೀಕ್ಷೆಯಲ್ಲಿನ ಭಾಷಾಂತರ ಎಡವಟ್ಟಿನಿಂದ ಅನ್ಯಾಯಕ್ಕೊಳಗಾಗಿದ್ದ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿ, ಮೇ 3ರಿಂದ ಅಂದರೆ ಇಂದಿನಿಂದ ಆರಂಭವಾಗುವ ಮುಖ್ಯ ಪರೀಕ್ಷೆಯನ್ನು ತೆಗೆದುಕೊಳ್ಳುವ ಅನುಮತಿ ಪಡೆದಿದ್ದರೆ, ಅವರಿಗೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ಸೇಡು ತೀರಿಸಿಕೊಳ್ಳುತ್ತಿದೆ ಈ ಪಾಪಿ ಕರ್ನಾಟಕ ಕಾಂಗ್ರೆಸ್ ಸರ್ಕಾರ.
ಒಂದು ಕಡೆ ಧೋ ಎಂದು ಸುರಿಯುತ್ತಿರುವ ಮಳೆ, ಮತ್ತೊಂದು ಕಡೆ ಅರ್ಜಿ ತುಂಬಲು ಯಾವ ದಾಖಲಾತಿಗಳು ಬೇಕೆ ಎನ್ನುವ ಗೊಂದಲ, ಹತ್ತಿರದಲ್ಲಿ ಒಂದು ಜೆರಾಕ್ಸ್ ಅಂಗಡಿ ಇಲ್ಲ, ಕುಡಿಯೋಕೆ ನೀರಿಲ್ಲ, ಕಾಫಿ ತಿಂಡಿಗೆ ಒಂದು ಹೋಟೆಲ್ ಇಲ್ಲ, ಹೆಣ್ಣುಮಕ್ಕಳಿಗೆ ಶೌಚಾಲಯವಿಲ್ಲ, ಹಸುಗೂಸುಗಳಿಗೆ ಹಾಲುಣಿಸೋಕೆ ಜಾಗ ಇಲ್ಲ, ಮಧ್ಯರಾತ್ರಿ ಆದರೂ ಹಾಲ್ ಟಿಕೆಟ್ ಕೈಗೆ ಸಿಕ್ಕಿಲ್ಲ, ಬೆಳಗಾದರೆ ಪರೀಕ್ಷೆ, ಇಂತಹ ಅವಾಂತರದ ನಡುವೆ ಪಾಪ ಅಭ್ಯರ್ಥಿಗಳು ಪರೀಕ್ಷೆ ಬರೆಯುವುದಾದರೂ ಹೇಗೆ?
ಸಿಎಂ ಸಿದ್ದರಾಮಯ್ಯನವರೇ, ಗ್ರಾಮೀಣ ಭಾಗದ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅಂದರೆ ತಮಗೆ ಯಾಕಿಷ್ಟು ದ್ವೇಷ? ಯಾಕಿಷ್ಟು ಅಸಡ್ಡೆ? ಬಡವರು ಮಕ್ಕಳು ಮುಂದೆ ಬರಬಾರದ?
ವಿಧಾನಸಭೆ ಅಧಿವೇಶನದಲ್ಲಿ ಕನ್ನಡ ಮಾಧ್ಯಮ ಅಭ್ಯರ್ಥಿಗಳ ಹಿತಾಸಕ್ತಿ ಕಾಪಡುವುದಾಗಿ ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಬೇರೆ ದಾರಿ ಇಲ್ಲದೆ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿ ಆದೇಶ ತಂದರೆ ಹಾಲ್ ಟಿಕೆಟ್ ಕೊಡಲು ಸತಾಯಿಸಿ ನೆಮ್ಮದಿಯಾಗಿ ಪರೀಕ್ಷೆ ಬರೆಯಲೂ ತೊಂದರೆ ಮಾಡಿದ್ದೀರಿ. ನೂರಾರು ಕನಸುಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ವರ್ಷಗಟ್ಟಲೆ ತಯಾರಿ ನಡೆಸಿದ ಅಭ್ಯರ್ಥಿಗಳ ಶಾಪ ನಿಮ್ಮ ಸರ್ಕಾರಕ್ಕೆ ತಟ್ಟದೇ ಇರದು ಎಂದಿದ್ದಾರೆ.