ಬೆಂಗಳೂರು: ರಾಹುಲ್ ಗಾಂಧಿ ಅವರ ಒತ್ತಾಯ, ಬಿಹಾರ ಚುನಾವಣೆ ಹಿನ್ನಲೆಯಲ್ಲಿ ಕೇಂದ್ರದಿಂದ ಜಾತಿಗಣತಿ ಮಾಡಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ 2014ರಿಂದ ನಮ್ಮ ನಾಯಕ ರಾಹುಲ್ ಗಾಂಧಿ, ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಾತಿಗಣತಿಗಾಗಿ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಇದೀಗ ಬಿಹಾರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ಹಾಗೂ ನಮ್ಮ ನಾಯಕರ ಒತ್ತಾಯಕ್ಕೆ ಮಣಿದು ಜನಗಣತಿಯೊಂದಿಗೆ ಜಾತಿಗಣತಿ ಮಾಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದ್ದು, ನಾವು ಸ್ವಾಗತಿಸುತ್ತೇವೆ. ಅತ್ಯಂತ ತ್ವರಿತವಾಗಿ ಈ ಕಾರ್ಯ ಮಾಡಬೇಕೆಂಬುದು ನಮ್ಮ ಒತ್ತಾಯ ಎಂದಿದ್ದಾರೆ.
ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನ ಹೆಸರು ನಾಮಕರಣ: ವಿಜಯಪುರ ನಗರದ ಬಸ್ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನವರ ಹೆಸರಿಡುತ್ತೇನೆ ಎಂದು ನಾನು ತಿಳಿಸಿದ್ದೆ. ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಮುಖ್ಯಮಂತ್ರಿಗಳು ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರಿಡಲು ಅಗತ್ಯ ಕ್ರಮ ಕೈಗೊಳ್ಳಲು ಸಾರಿಗೆ ಸಚಿವರಿಗೆ ಸೂಚಿಸಿದ್ದರು. ಇದೀಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮುತುವರ್ಜಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮನವರ ಹೆಸರು ನಾಮಕರಣ ಮಾಡಲು ಆದೇಶ ಹೊರಡಿಸಿದ್ದಾರೆ. ಅಲ್ಲದೇ, ವಿಜಯಪುರ ವಿಮಾನ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರರ ಹೆಸರನ್ನು ನಾಮಕರಣಗೊಳಿಸಲಾಗಿದೆ ಎಂದರು.