ಜಾತಿ, ಜನಗಣತಿಗೆ ಕೇಂದ್ರ ನಿರ್ಧಾರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಾಗತ
ದಾವಣಗೆರೆ: ದೇಶದ ಜಾತಿ, ಜನಗಣತಿ ಆಗಬೇಕು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿರುವುದಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಾಗತಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ‍್ಯ ಪೂರ್ವದಲ್ಲಿ ನಡೆದಿದ್ದ ಜನಗಣತಿ ಇದುವರೆಗೂ ಆಗಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದರು. ಯಾವುದೇ ವರ್ಗಕ್ಕೆ ಅನ್ಯಾಯವಾಗದ ರೀತಿ ಜಾತಿ ಗಣತಿಗೆ ಮುಂದಾಗಿದ್ದಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇರೋದು, ರಾಜ್ಯ ಸರ್ಕಾರಕ್ಕೆ ಇಲ್ಲ. ಸಿದ್ದರಾಮಯ್ಯ ಸರ್ಕಾರ ಓಟ್ ಬ್ಯಾಂಕ್‌ಗಾಗಿ, ಸ್ವಾರ್ಥಕ್ಕಾಗಿ ಜಾತಿ ಜನಗಣತಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಕಾಂತರಾಜ್ ಆಯೋಗದ ಮೂಲ ಪ್ರತಿಯೇ ಕಾಣೆಯಾಗಿದೆ. ಮೊದಲು ಅದನ್ನು ಬಿಡುಗಡೆ ಮಾಡಿ. ಸಿದ್ದರಾಮಯ್ಯ ಮನೆಯಲ್ಲೇ ಜಯಪ್ರಕಾಶ್ ಹೆಗಡೆ ಅವರನ್ನು ಕೂರಿಸಿ ಯಾವುದೇ ಮನೆಗೆ ಹೋಗದೆ ಜಾತಿ ಗಣತಿ ವರದಿ ಸಿದ್ಧಪಡಿಸಿದ್ದಾರೆ ಎಂದು ಟೀಕಿಸಿದರು. ಬಿಜೆಪಿ ಜಾತಿ ಗಣತಿ ವಿರೋಧಿಯಲ್ಲ, ಆದರೆ ಅದು ವೈಜ್ಞಾನಿಕವಾಗಿರಬೇಕು ಎಂದು ಬಯಸುತ್ತದೆ. ಜಾತಿ ಗಣತಿ ವರದಿ ಕಳೆದು ಹೋಗಿದೆಯೋ ಅಥವಾ ಇಲ್ಲವೋ, ಇವರೇ ಬಚ್ಚಿಟ್ಟಿದ್ದಾರೋ ಗೋತ್ತಿಲ್ಲ ಎಂದರು.
ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದಲ್ಲಿ ಮೋದಿ ಗಯಾಬ್ ಎಂದು ಪೋಸ್ಟ್ ಮಾಡಿದ್ದಾರೆ. ಅನಂತರ ಸಾರ್ವಜನಿಕರ ಅಕ್ರೋಶ ಹೊರ ಹಾಕುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ಪರವಾಗಿ ನಾವು ಇದ್ದೇವೆ ಎನ್ನುತ್ತಾರೆ. ಆದರೆ ಸಿಎಂ ಹಾಗೂ ಸಚಿವರು ಭದ್ರತಾ ವೈಫಲ್ಯ ಎನ್ನುತ್ತಾ ಬೊಬ್ಬೆ ಹೊಡೆಯುತ್ತಿದ್ದಾರೆ. ಪೆಹಲ್ಗಾಮ್ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪದ ಬಳಕೆ ಸರಿಯಾಗಿಲ್ಲ ಎನ್ನುತ್ತಾರೆ. ನೀವು ಬಳಸುವ ಶಬ್ದಗಳನ್ನು ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಲಿ ಎಂದು ಸಂತೋಷ್ ಲಾಡ್‌ಗೆ ಎಚ್ಚರಿಕೆ ನೀಡಿದರು.