ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಬುಧವಾರ ಅನಿರೀಕ್ಷಿತವಾಗಿ ಭೇಟಿ ನೀಡಿ ಅಲ್ಲಿನ ವಿವಿಧ ಶಾಖೆಗಳ ಕಡತ ಹಾಗೂ ಇತರೆ ದಾಖಲೆಗಳ ಪರಿಶೀಲನೆ ನಡೆಸಿದರು.
ಪಾಲಿಕೆ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಹಾಜರಾತಿ ಪುಸ್ತಕ, ಚಲನ-ವಲನ ವಹಿ ಮತ್ತು ನಗದು ಘೋಷಣಾ ವಹಿಗಳ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರಲ್ಲದೇ, ಸರಿಯಾಗಿ ನಿರ್ವಹಿಸದಿರುವ ಕುರಿತು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಅಭಿಯಂತರರು ವಿಭಾಗ ಶಾಖೆಗಳಿಗೆ ನೀಡಿ ಪರಿಶೀಲಿಸಿ, ಸೂಕ್ತ ದಾಖಲೆಗಳು ನೀಡದ ಕಾರಣ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿದರು.
ನಗರದಲ್ಲಿ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗುತ್ತಿದೆಯೇ, ಒಂದು ವೇಳೆ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಲ್ಲಿ ಅಂತವರಿಗೆ ನೋಟಿಸ್ ನೀಡಲಾಗಿದೆಯೇ? ಇಲ್ಲಿಯವರೆಗೆ ಎಷ್ಟು ನೋಟಿಸ್‌ಗಳನ್ನು ನೀಡಿದ್ದೀರಿ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಪ್ರಶ್ನಿಸಿದರು.
ವಲಯ ಮೂರರ ಅಧಿಕಾರಿ ಕಚೇರಿಯಲ್ಲಿ ಖಾಸಗಿ ವ್ಯಕ್ತಿಯೋರ್ವ ಯಾವುದೇ ರೀತಿಯ ಅಧಿಕಾರ ಇಲ್ಲದೆ ಮಹಾನಗರ ಪಾಲಿಕೆ ಕಡತಗಳನ್ನು ನಿರ್ವಹಣೆ ಮಾಡುತ್ತಿರುವ ಕುರಿತು, ವಿಡಿಯೋ ತುಣುಕು ಹರಿದಾಡುತ್ತಿದೆ. ಈ ಸಂಬಂಧ ಮಹಾನಗರ ಪಾಲಿಕೆ ಅಯುಕ್ತರು ಏನು ಕ್ರಮಕೈಗೊಂಡಿದ್ದೀರಿ ಎಂದು ನ್ಯಾ.ಬಿ. ವೀರಪ್ಪ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತೆ ರೇಣುಕಾ ಕಚೇರಿಯ ಸಂಬಂಧಪಟ್ಟ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಪೊಲೀಸ್ ಇಲಾಖೆ ವಿಡಿಯೋ ಸತ್ಯಾಸತ್ಯತೆ ತಿಳಿಯಲು ಪತ್ರ ಬರೆದಿರುವುದಾಗಿ ಮಾಹಿತಿ ನೀಡಿದರು.
ಆಯುಕ್ತರ ಉತ್ತರಕ್ಕೆ ಅಸಮಾಧನಗೊಂಡ ನ್ಯಾ.ಬಿ.ವೀರಪ್ಪ, ಸಂಬಂಧಪಟ್ಟ ಅಧಿಕಾರಿಯನ್ನು ಈ ಕೂಡಲೇ ಇಲಾಖೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಬೇಕು. ಖಾಸಗಿ ವ್ಯಕ್ತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಬೇಕು ಎಂದು ಆಯುಕ್ತರಿಗೆ ನಿರ್ದೇಶನ ನೀಡಿದರು.
ನ್ಯಾ.ಬಿ.ವೀರಪ್ಪ ಸೂಚನೆಯಂತೆ ವಲಯ ಮೂರರ ಉಪ ಆಯುಕ್ತೆ ಈರಮ್ಮ ಹಾಗೂ ವಿಷಯ ನಿರ್ವಾಹಕಿ ನೇತ್ರಾ ಅವರನ್ನು ಅಮಾನತು ಮಾಡುವಂತೆ ಆಯುಕ್ತೆ ರೇಣುಕಾ ಶಿಫಾರಸು ಮಾಡಿದ್ದಾರೆ.