ಕಲಬುರಗಿ: ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿರುವಂತೆ ಪ್ರಸಕ್ತವಾಗಿ ೨೦೦೦ ಬಸ್‌ಗಳ ಖರೀದಿಗೆ ಮುಂದಾಗಿದ್ದು, ಈ ಪೈಕಿ ವಾಯವ್ಯ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ತಲಾ ೭೦೦ ಹೊಸ ಬಸ್‌ಗಳನ್ನು ಕಲ್ಪಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನೆ ಮುನ್ನ ಇಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಸ್ತೆಗಳು ಹಾಳಾಗಲು ಹೆಚ್ಚು ಭಾರವುಳ್ಳ ಲಾರಿಗಳು ಓಡಾಡುವುದು ಸಹ ಪ್ರಮುಖ ಕಾರಣವಾಗಿದೆ. ಹೀಗಾಗಿ ಇದರ ವಿರುದ್ಧ ಸತತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮುಂದಿನ ತಿಂಗಳು ಗಾಣಗಾಪುರಕ್ಕೆ ಭೇಟಿ:
ಜಿಲ್ಲೆಯ ಸುಕ್ಷೇತ್ರ ದೇವಲ್ ಗಾಣಗಾಪುರ ಸಮಗ್ರ ಅಭಿವೃದ್ಧಿಯಾಗಬೇಕು ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂಬುದು ಬಹಳ ದಿನಗಳ ಬೇಡಿಕೆ ಇದೆ. ಹೀಗಾಗಿ ಮುಂದಿನ ತಿಂಗಳು ಅಧಿಕಾರಿಗಳೊಂದಿಗೆ ದೇವಲ್ ಗಾಣಗಾಪುರಕ್ಕೆ ಭೇಟಿ ನೀಡಿ ಅಭಿವೃದ್ಧಿ ನೀಲಿನಕ್ಷೆ ರೂಪಿಸಲಾಗುವುದು. ಈಗಾಗಲೇ ಚಾಮುಂಡಿ, ಹುಲಿಗೆಮ್ಮ, ಸವದತ್ತಿ, ಘಾಟಿ ಸುಬ್ರಹ್ಮಣ್ಯಂ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ಜತೆಗೆ ಅಭಿವೃದ್ಧಿಗೂ ಪೂರಕವಾಗಿದೆ. ಈಗ ದೇವಲ್ ಗಾಣಗಾಪುರ, ಕುಕ್ಕೆ ಸುಬ್ರಹ್ಮಣ್ಯಂ ಸೇರಿ ಇತರ ಕ್ಷೇತ್ರಗಳ ಪ್ರಾಧಿಕಾರ ರಚನೆಗೆ ಮನವಿ ಹಾಗೂ ಒತ್ತಡ ಬರುತ್ತಿದೆ ಎಂದು ಮುಜರಾಯಿ ಖಾತೆಯ ಸಚಿವರೂ ಆಗಿರುವ ರಾಮಲಿಂಗರಡ್ಡಿ ಸ್ಪಷ್ಟಪಡಿಸಿದರು.
ನೆರೆಯ ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿನ ಕರ್ನಾಟಕ ಭವನದ ನಿರ್ಮಾಣ ಕಾರ್ಯ ಚಾಲ್ತಿಗೆ ನೀಡುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಆಂಧ್ರದ ಡಿಸಿಎಂ ಅವರ ಜತೆ ಮಾತನಾಡಿದ್ದಾರೆ. ಆದರೆ ಎರಡೂ ರಾಜ್ಯಗಳ ನಡುವೆ ಒಪ್ಪಂದ ಅಂತಿಮಗೊಳ್ಳಬೇಕಿದೆ ಎಂದರು.