ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಸಾವು

ಶಿವಮೊಗ್ಗ: ಭದ್ರಾ ಜಲಾಶಯ ಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಮೃತಪಟ್ಟ ದಾರುಣ ಘಟನೆ, ಬಿಆರ್‌ಪಿಯಲ್ಲಿ ನಡೆದಿದೆ. ಭದ್ರಾವತಿ ನಗರದ ಭೂತನಗುಡಿ ನಿವಾಸಿ ಫ್ಲೈವುಡ್ ಅಂಗಡಿಯೊಂದರ ಮಾಲಿಕರಾದ ಮೊಹಮ್ಮದ್ ಜಾಬೀರ್ (55) ಹಾಗೂ ಅವರ ಪುತ್ರ ಜಾವೇದ್ (15) ಮೃತಪಟ್ಟವರೆಂದು ಗುರುತಿಸಲಾಗಿದೆ.
ಭಾನುವಾರ ಜಾಬೀರ್ ಅವರು ಕುಟುಂಬದವರೊಂದಿಗೆ ಭದ್ರಾ ಜಲಾಶಯಕ್ಕೆ ವಿಹಾರಕ್ಕೆಂದು ಆಗಮಿಸಿದ್ದರು. ಊಟವಾದ ನಂತರ ಪುತ್ರ ಜಾವೇದ್ ಜಲಾಶಯದ ಹಿನ್ನೀರಿನಲ್ಲಿ ಈಜಾಡುತ್ತಿದ್ದ, ಈ ವೇಳೆ ಮುಳುಗಲಾರಂಭಿಸಿದ್ದಾನೆ.
ತಕ್ಷಣವೇ ಜಾಬೀರ್ ಅವರು ಮುಳುಗುತ್ತಿದ್ದ ಮಗನ ರಕ್ಷಣೆಗೆಂದು ನೀರಿಗೆ ಧುಮುಕಿದ್ದಾರೆ. ಆದರೆ ಅಪ್ಪ-ಮಗ ಇಬ್ಬರು ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು, ಹಿನ್ನೀರಿನಿಂದ ಬಾಲಕನ ಶವ ಪತ್ತೆ ಹಚ್ಚಿ ಹೊರ ತೆಗೆದಿದ್ದರು. ಮುಳುಗು ತಜ್ಞ ಮಲ್ಪೆ ಈಶ್ವರ್ ನೇತೃತ್ವದ ತಂಡವು ಜಾಬೀರ್ ಅವರ ಶವ ಪತ್ತೆ ಹಚ್ಚಿ ಹೊರತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಸಬ್‌ಇನ್ಸ್ಪೆಕ್ಟರ್ ಶಿಲ್ಪಾ ಅವರು ಭೇಟಿ ನೀಡಿದ್ದರು. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.