ದಾವಣಗೆರೆ: ರಾಜ್ಯ ಸರ್ಕಾರದ ವಿರುದ್ಧ ನಡೆಸಿದ ಬಿಜೆಪಿ ಜನಾಕ್ರೋಶ ಯಾತ್ರೆ ಮುಗಿದ ಒಂದು ತಾಸಿನಲ್ಲಿ ಬಹಿರಂಗ ಸಮಾವೇಶದ ಸಮೀಪ ಹಾಗೂ ಜಯದೇವ ವೃತ್ತದಲ್ಲಿ ಹಾಕಲಾಗಿದ್ದ ಬೃಹತ್ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ರಾಜ್ಯ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಫ್ಲೆಕ್ಸ್‌ಗಳನ್ನು ಹಾಕಲು ಮಹಾನಗರ ಪಾಲಿಕೆಯಿಂದ ಪರವಾನಿಗೆ ತೆಗೆದುಕೊಳ್ಳಬೇಕು. ಪರವಾನಿಗೆ ತೆಗೆದುಕೊಂಡ ಬಳಿಕ ಪ್ರಿಂಟ್ ಆಗುವ ಫ್ಲೆಕ್ಸ್‌ಗಳ ಮೇಲೆ ಪಾಲಿಕೆಯ ಸೀಲ್ ಇರಬೇಕು. ಆದರೆ ಫ್ಲೆಕ್ಸ್‌ಗಳ ಮೇಲೆ ಸೀಲ್ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಒಂದು ನ್ಯಾಯ ರಾಜಕೀಯ ಪಕ್ಷಗಳಿಗೆ ಒಂದು ನ್ಯಾಯ ಎಂದು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು.