ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ರಸ್ತೆ ಬಂದ್ಮೂವರ ವಿರುದ್ಧ ಪ್ರಕರಣ

0
21


ಸಂ. ಕ. ಸಮಾಚಾರ, ಮಂಗಳೂರು: ಅಡ್ಯಾರಿನಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಏ.೧೮ರಂದು ಪ್ರತಿಭಟನೆ ನಡೆಯುತ್ತಿದ್ದಾಗ ಕೆಲವು ಯುವಕರು ಸೇರಿ ಉದ್ದೇಶಪೂರ್ವಕ ಹೆದ್ದಾರಿಯನ್ನು ಬಂದ್ ಮಾಡಿಸಿದ್ದರು. ಸ್ಥಳದಲ್ಲಿದ್ದ ಪೊಲೀಸರು ಎಷ್ಟು ಮನವಿ ಮಾಡಿಕೊಂಡರೂ, ಯುವಕರು ಪಟ್ಟು ಸಡಿಲಿಸಿರಲಿಲ್ಲ. ಇದೀಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿದ್ದಕ್ಕೆ ಪ್ರತಿಯಾಗಿ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಮಾಡಿದ ವಿಡಿಯೋ ಆಧರಿಸಿ ಮೂವರು ಆರೋಪಿಗಳನ್ನು ಗುರುತಿಸಿದ್ದು, ಅವರ ಹೆಸರನ್ನು ಎಫ್‌ಐಆರ್ ನಲ್ಲಿ ನಮೂದಿಸಲಾಗಿದೆ. ಜಲೀಲ್ ಕೃಷ್ಣಾಪುರ, ಫಝಲ್ ವಳಚ್ಚಿಲ್, ಮೊಹಮ್ಮದ್ ಹನೀಫ್ ನೌಫಾಲ್ ಎಂಬವರನ್ನು ಗುರುತಿಸಿದ್ದು, ಇನ್ನಿತರ ಯುವಕರನ್ನು ವಿಡಿಯೋ ಆಧರಿಸಿ ಗುರುತು ಹಚ್ಚಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ೭೩ರ ಬದಿಯಲ್ಲೇ ಅಡ್ಯಾರಿನಲ್ಲಿ ವಕ್ಫ್ ವಿರೋಧಿ ಸಮಾವೇಶ ಶುಕ್ರವಾರ ಸಂಜೆ ನಡೆದಿತ್ತು. ಆದರೆ ಸಂಜೆ ೪.೩೦ರ ವೇಳೆಗೆ ಏಕಾಏಕಿ ರಸ್ತೆಯ ನಡುವೆ ಬಂದಿದ್ದ ಯುವಕರ ತಂಡವು ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿತ್ತು. ಆನಂತರ, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ಧಾರ್ಥ ಗೋಯಲ್ ಬಂದು ಮನವಿ ಮಾಡಿಕೊಂಡರೂ ಅಲ್ಲಿ ನಿಂತಿದ್ದ ಯುವಕರು ಕೇಳಲಿಲ್ಲ. ಪೊಲೀಸ್ ಅಧಿಕಾರಿಗಳ ಜೊತೆಗೇ ವಾದಿಸುತ್ತ, ನಾವು ಹೆದ್ದಾರಿ ಬಂದ್ ಮಾಡಿಯೇ ಮಾಡುತ್ತೇವೆ, ನಮಗೆ ಹಕ್ಕಿದೆ ಎಂದು ಹೇಳುತ್ತಿದ್ದರು.
ಇದರಿಂದಾಗಿ ಆಂಬುಲೆನ್ಸ್ ಸಂಚಾರ ಸೇರಿದಂತೆ ತುರ್ತು ಸೇವೆಗಳಿಗೂ ತೊಂದರೆಯಾಗಿತ್ತು. ಪೊಲೀಸರ ಕರ್ತವ್ಯಕ್ಕೂ ಅಡ್ಡಿಯಾಗಿತ್ತು. ಹೈಕೋರ್ಟಿನಿಂದ ಹೆದ್ದಾರಿ ಬಂದ್ ಮಾಡಬಾರದೆಂದು ಸೂಚನೆ ಇದ್ದುದರಿಂದ ಪೊಲೀಸರು ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಶತಪ್ರಯತ್ನ ಮಾಡಿದ್ದರು. ಆದರೆ ಯುವಕರ ದುರ್ವರ್ತನೆಯಿಂದಾಗಿ ಪೊಲೀಸರಿಗೆ ಏನು ಮಾಡುವುದಕ್ಕೂ ಸಾಧ್ಯವಾಗಿರಲಿಲ್ಲ.
ಇದೀಗ ಕಂಕನಾಡಿ ನಗರ ಠಾಣೆಯಲ್ಲಿ ಸೆಕ್ಷನ್ ೧೮೯(೨), ೧೨೬(೨), ೨೭೦, ೩೨೪(೪) ೧೩೨, ೨೮೫, ೧೯೦ ಬಿಎನ್‌ಎಸ್ ಪ್ರಕಾರ ಕೇಸು ದಾಖಲಾಗಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ರಸ್ತೆ ತಡೆ ನಡೆಸಿದವರನ್ನು ವಿಡಿಯೋ ಆಧರಿಸಿ ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ. ತನಿಖೆ ಮುಂದುವರಿಸಿದ್ದು, ಈ ರೀತಿಯ ದುಷ್ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

Previous articleಅಟ್ರಾಸಿಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಡಿ ಸಿ ಆರ್ ಇ ಪೊಲೀಸ್ ಠಾಣೆ ಪ್ರಾರಂಭ : ಜಿಲ್ಲಾ ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ
Next articleಹಿಂದೂ ಸಮಾಜದ ಅತಿ ಶ್ರದ್ಧೆಯ ನಿಯಮಗಳನ್ನು ಹಾಳು ಮಾಡುವ ಕುತಂತ್ರ