ಕಾಶಪ್ಪನವರ ಆರೋಪಕ್ಕೆ 20ರಂದೇ ಉತ್ತರ

0
45

ಬಾಗಲಕೋಟೆ: ಸಮುದಾಯದ ಮೀಸಲಾತಿಗಾಗಿ ಆಂದೋಲನ ಹಾಗೂ ಆಂತರಿಕ ಭಿನ್ನಾಭಿಪ್ರಾಯಗಳ ನಿವಾರಣೆಗಾಗಿ ಪಂಚಮಸಾಲಿಗಳ ರಾಜ್ಯಮಟ್ಟದ ಸಭೆಯನ್ನು ಏ. 20 ರಂದು ಮಧ್ಯಾಹ್ನ 3ಕ್ಕೆ ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ಕರೆಯಲಾಗುವುದೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ, ರಾಜ್ಯ, ಸಮುದಾಯಗಳ ವಿಭಾಗದ ಎಲ್ಲ ಪದಾಧಿಕಾರಿಗಳು, ಸಚಿವರು, ಶಾಸಕರು ಸೇರಿದಂತೆ ಸಮುದಾಯಕ್ಕೆ ಸೇರಿದ ಇತರರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
2ಎ ಮೀಸಲಾತಿಗಾಗಿ ಇನ್ನಷ್ಟು ವ್ಯವಸ್ಥಿತವಾಗಿ ಹೋರಾಟದ ಹಿನ್ನಲೆ ವೇದಿಕೆ ಶಕ್ತಿ ತರಲಿದೆ. ಮುಂದಿನ ನಡೆಯ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯಲಿದೆ ಎಂದರು.
ಕಾಶಪ್ಪನವರ ಆರೋಪಕ್ಕೆ ಅಂದೇ ಉತ್ತರ
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಶಾಸಕ ವಿಜಯಾನಂದ ಕಾಶಪ್ಪನವರ ಅವರು ಸ್ವಾಮೀಜಿಗಳ ಮೇಲಿನ ಆರೋಪಗಳ ಸುರಿಮಳೆ ಹರಿಸಿದರು. ಇದ್ಯಾವದಕ್ಕೂ ಉತ್ತರ ನೀಡದ ಸ್ವಾಮೀಜಿ, ಇವೆಲ್ಲವುಗಳಿಗೆ ದಿ. 20ರಂದೇ ವೇದಿಕೆಯಲ್ಲಿ ಉತ್ತರ ನೀಡಲಾಗುವುದೆಂದರು.
ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಸಮಾಜದ ವೇದಿಕೆ ಬಲಗೊಳ್ಳುವದರ ಜೊತೆಗೆ ೨ಎ ಮೀಸಲಾತಿಗಾಗಿ ಎಲ್ಲ ರೀತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಜನರು ಆಗಮಿಸಲಿದ್ದಾರೆಂದರು. ಇದೇ ಸಂದರ್ಭ ಸಮಾಜದ ಜಮಖಂಡಿ ತಾಲೂಕಾಧ್ಯಕ್ಷ ಮಹಾದೇವ ಈಟಿ, ಮುಧೋಳ ತಾಲೂಕಾಧ್ಯಕ್ಷ ದಾನಪ್ಪಗೋಳ, ರಬಕವಿ-ಬನಹಟ್ಟಿ ತಾಲೂಕಾಧ್ಯಕ್ಷ ಶ್ರೀಶೈಲ ದಲಾಲ, ಬಾಬಾಗೌಡ ಪಾಟೀಲ ಉಪಸ್ಥಿತರಿದ್ದರು.

Previous articleಪಂಚಮಸಾಲಿ ಟ್ರಸ್ಟ್‌ಗೆ ಕಾಶಪ್ಪನವರ ನೂತನ ಅಧ್ಯಕ್ಷ
Next articleಜನಿವಾರ ತೆಗೆಸಿ ಪರೀಕ್ಷೆಗೆ ಅವಕಾಶ: ಖಂಡನೆ