ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ

ಚಿಕ್ಕೋಡಿ: ಜಾತಿಗಣತಿ ವೈಜ್ಞಾನಿಕವಾಗಿ ನಡೆದಿಲ್ಲ. ಜಾತಿ, ಜಾತಿಗಳ ಮಧ್ಯದಲ್ಲಿ ಕಂದಕ ತರುವ ಕಾರ್ಯವನ್ನು ಮುಖ್ಯಮಂತ್ರಿ ಮಾಡುತ್ತಿದ್ದಾರೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಜನರಿಗೆ ಮೋಸ ಮಾಡುವ ಹಾಗೂ ಮತ ಬ್ಯಾಂಕ್ ಕಮಟು ವಾಸನೆ ಕಾಂತರಾಜ ವರದಿಯಲ್ಲಿದೆ. ಕಾಂತರಾಜ ಹಾಗೂ ಜಯಪ್ರಕಾಶ ಅವರು ನಿಜವಾದ ವರದಿ ನೀಡಿಲ್ಲ ಎಂದರು.
ಎಲ್ಲಾ ಸಮಾಜ ಹಾಗೂ ಜಾತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮೀಕ್ಷೆ ನಡೆಸಲಾಗಿಲ್ಲ. ಲಿಂಗಾಯತ ಒಳಪಂಗಡಗಳನ್ನು ಬೇರೆ ಬೇರೆಯಾಗಿ ನಮೂದನೆ ಮಾಡುವ ಮೂಲಕ ಬಹಳಷ್ಟು ಜನಾಂಗಗಳಿಗೆ ವರದಿಯಿಂದ ಅನ್ಯಾಯವಾಗಿದೆ. ಮುಸ್ಲಿಂ ಸಮಾಜದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಒಳಪಂಗಡಗಳಿವೆ. ಅವುಗಳನ್ನು ಪ್ರತ್ಯೇಕವಾಗಿ ಏಕೆ ವರದಿ ಮಾಡಿಲ್ಲ? ಮುಸ್ಲಿಂರಲ್ಲಿ ದಲಿತರಿದ್ದಾರೆ. ಅವರಿಗೆ ಮೀಸಲಾತಿ ಲಾಭ ಸಿಗಬೇಕು. ಆದರೆ ಮುಸ್ಲಿಂ ಬಾಂಧವರನ್ನು ತುಷ್ಟೀಕರಣ ಮಾಡುವ ಹುನ್ನಾರ ನಡೆದಿದೆ ಎಂದರು.
ಕಾಂತರಾಜ ಅವರಿಗೆ ಯಾವ ಜನಾಂಗದವರು ಏನೂ ಕೆಲಸ ಮಾಡುತ್ತಾರೆ ಎಂಬ ಕನಿಷ್ಠ ಮಾಹಿತಿ ಇಲ್ಲ ಎಂದು ಟೀಕಿಸಿದರು.
ಮೋದಿ ಅವರು ದಲಿತರಿಗೆ ಒಳ ಮೀಸಲಾತಿ ನೀಡುವ ನಿಟ್ಟಿನಲ್ಲಿ ಅವರ ಸುಪ್ರೀಂ ಕೋರ್ಟ್ನಿಂದ ಬಂದಿರುವ ಆದೇಶವನ್ನು ಎಲ್ಲಾ ರಾಜ್ಯಗಳು ಜಾರಿ ಮಾಡುವಂತೆ ಸೂಚಿಸಿದ್ದಾರೆ. ಪಕ್ಕದ ಹಲವಾರು ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಮೊದಲನೆ ಸಚಿವ ಸಂಪುಟದಲ್ಲೆ ಜಾರಿಗೊಳಿಸುವದಾಗಿ ಹೇಳಿದೆ. ಇಲ್ಲಿಯವರೆಗೆ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿದರು.