ಹುಬ್ಬಳ್ಳಿ ಎನ್‌ಕೌಂಟರ್‌ ಪ್ರಕರಣ: ಮಧ್ಯಾಹ್ನ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ

ಬೆಂಗಳೂರು : ಹುಬ್ಬಳ್ಳಿಯಲ್ಲಿ ಎನ್​​ಕೌಂಟರ್ ಆದ ಬಿಹಾರದ ರಿತೇಶ್‌ ಕುಮಾರ್‌ ಮೃತದೇಹದ ಶವಸಂಸ್ಕಾರಕ್ಕೆ ತಡೆ ನೀಡಬೇಕು ಹಾಗೂ ತುರ್ತಾಗಿ ವಿಚಾರಣೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಮಧ್ಯಾಹ್ನ 3:30ಕ್ಕೆ ನಡೆಸುವುದಾಗಿ ಹೈಕೋರ್ಟ್ ತಿಳಿಸಿದೆ.
ಬೆಳಗ್ಗೆ ಕಲಾಪ ಪ್ರಾರಂಭವಾಗುತ್ತಿದ್ದಂತೆ ಅರ್ಜಿದಾರರ ಪರ ವಕೀಲರು, ಎನ್​​ಕೌಂಟರ್​ಗೆ ಗುರಿಯಾದ ರಿತೇಶ್ ಮೃತದೇಹವನ್ನು ಶವಸಂಸ್ಕಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿದರು. ಅರ್ಜಿ ಸಲ್ಲಿಸಲು ವಿಳಂಬವಾಗಿದೆ. ಎನ್​​ಕೌಂಟರ್ ಕುರಿತಂತೆ ಕೆಲವು ಸಂಶಯಗಳಿದ್ದು, ಮೃತದೇಹವನ್ನು ಶವಸಂಸ್ಕಾರ ಮಾಡಿದಲ್ಲಿ ಸಾಕ್ಷ್ಯಗಳ ನಾಶವಾಗಲಿದೆ. ಆದ ಕಾರಣ ಶವಸಂಸ್ಕಾರಕ್ಕೆ ತಡೆ ನೀಡಬೇಕು ಎಂದು ಕೋರಿದರು. ಹೈಕೋರ್ಟ್ ಪೀಠವು ಮಧ್ಯಾಹ್ನ ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿದೆ.