ಹಳಿ ತಪ್ಪಿದ ಗೂಡ್ಸ್: ತಪ್ಪಿದ ಅನಾಹುತ

ಬೆಳಗಾವಿ: ಬೆಳಗಾವಿ ಬಳಿ ಗೂಡ್ ರೈಲು ಹಳಿ ತಪ್ಪಿದರಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿದೆ.
ಜಿಂದಾಲ್ ಫ್ಯಾಕ್ಟರಿಯಿಂದ ಕಬ್ಬಿಣದ ಅಡಿರು ತುಂಬಿಕೊಂಡು ಮಿರಜ್ ಕಡೆಗೆ ಹೊರಟಿದ್ದ ಗೂಡ್ ರೈಲು ಬೆಳಗಾವಿಯ ಮಿಲಿಟರಿ ಮಹಾದೇವ ಬಳಿ ಹಳಿ ತಪ್ಪಿದ ಘಟನೆ ನಡೆದಿದ್ದು. ಪರಿಣಾಮವಾಗಿ ಇತರೆ ರೈಲು ಸಂಚಾರಕ್ಕೆ ತಾತ್ಕಾಲಿಕ ಅಡಚಣೆ ಉಂಟಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಘಟನೆಯಿಂದಾಗಿ ಮಿರಜ್ ಮಾರ್ಗದ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ದುರಸ್ತಿ ಕಾರ್ಯಗಳು ತ್ವರಿತವಾಗಿ ನಡೆಯುತ್ತಿವೆ. ತಾಂತ್ರಿಕ ಸಿಬ್ಬಂದಿ ಸ್ಥಳದಲ್ಲಿ ತಕ್ಷಣ ಕಾರ್ಯಾರಂಭಿಸಿದ್ದು, ಹಳಿ ತಿದ್ದುಪಡಿ ಬಳಿಕ ರೈಲು ಸಂಚಾರ ಪುನರಾರಂಭವಾಗಲಿದೆ.

ಈ ಮಧ್ಯೆ ಮಿರಜ್ ದಿಂದ ಬರುತ್ತಿದ್ದ ಜಾಲುಕಾ ಶರಾವತಿ ಎಕ್ಸ್‌ಪ್ರೆಸ್, ಎಲ್ ಟಿಟಿ ದಾದರ್ ಎಕ್ಸ್‌ಪ್ರೆಸ್ ಮತ್ತು ಅಜ್ಮೀರ್ ಎಕ್ಸ್‌ಪ್ರೆಸ್‌ಗಳು ಮಾರ್ಗ ಮಧ್ಯದಲ್ಲಿ ನಿಂತುಕೊಂಡಿವೆ. ಅಲ್ಲದೇ ಬೆಳಗಾವಿಯಿಂದ ಹೊರಟ ಹಲವಾರು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.