- ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟನೆ
- ಜನರ ದಿಕ್ಕು ತಪ್ಪಿಸೋ ಕೆಲಸ ಮಾಡುತ್ತಿದೆ ಕಾಂಗ್ರೆಸ್
ಹುಬ್ಬಳ್ಳಿ: ವಕ್ಫ್ ತಿದ್ದುಪಡಿ ಮಸೂದೆ “ಉಮೀದ್” ಮುಸ್ಲಿಂರ ವಿರುದ್ಧ ತಂದಂಥ ಕಾಯ್ದೆಯಲ್ಲ; ವಕ್ಫ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಪಾರದರ್ಶಕತೆಗಾಗಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕರಿಸಿದ ಮತ್ತು ರಾಷ್ಟ್ರಪತಿ ಅನುಮೋದಿಸಿದ ಕಾಯ್ದೆಯಾಗಿದ್ದು, ಎಲ್ಲರೂ ಗೌರವಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದ ಜತೆ ಮಾತನಾಡುತ್ತ, ಕರ್ನಾಟಕದಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಜಾರಿ ತರುವುದಿಲ್ಲ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿ ಜಮೀರ್ ಒಬ್ಬರೇ ಅಲ್ಲ, ಸಿದ್ದರಾಮಯ್ಯ, ರಾಹುಲ್ ಗಾಂಧಿ ಯಾರೇ ಹೇಳಿದರೂ ಸರಿ ಅನುಷ್ಠಾನಕ್ಕೆ ತರುವ ಅಗತ್ಯತೆಯಿದೆ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆ ಜಾರಿ ತಂದಿರುವುದು ಮುಸ್ಲಿಂರ ವಿರುದ್ಧವಾಗಿ ಅಲ್ಲ; ವಕ್ಫ್ ಆಸ್ತಿ ಸಂರಕ್ಷಣೆಗಾಗಿಯೇ ಎಂಬುದನ್ನು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಸ್ಪಷ್ಟಪಡಿಸಿದ್ದಾರೆ. ಮುಸ್ಲಿಂ ಸಮುದಾಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲೆಂದೇ ಜಾರಿ ತಂದಿದ್ದಾಗಿದೆ ಎಂದು ಹೇಳಿದರು.
ಅದರಂತೆ ಇದು ವಕ್ಫ್ ಆಡಳಿತದಲ್ಲಿ ಪಾರದರ್ಶಕತೆ ತರುತ್ತದೆ. ವಕ್ಫ್ ಆದಾಯವನ್ನು ವೃದ್ಧಿಸುತ್ತದೆ ಮತ್ತು ಬಡ ಮುಸಲ್ಮಾನರ ಸೇವೆಗೇ ಸಲ್ಲುತ್ತದೆ. ಈ ಮೂಲಕ ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ಸೇವೆಗೆ ಬಲ ತುಂಬುವ ಧ್ಯೇಯದಿಂದ ಉಮೀದ್ ಜಾರಿ ತರಲಾಗಿದೆ ಎಂದು ಹೇಳಿದರು.
ಯುಪಿಎ ಸಹ ಸಂಸತ್ ಕಾಯ್ದೆ ಜಾರಿ ತಂದಿತ್ತು: ವಕ್ಫ್ ತಿದ್ದುಪಡಿ ಕಾಯ್ದೆ ೧೯೯೫ರಲ್ಲೂ ಸಂಸತ್ ಕಾಯ್ದೆಯಾಗಿತ್ತು. ೨೦೧೩ರಲ್ಲಿ ಯುಪಿಎ ಸರ್ಕಾರ ತಂದದ್ದೂ ಸಹ ಸಂಸತ್ ಕಾಯ್ದೆಯೇ ಆಗಿತ್ತು. ಈಗ ೨೦೨೫ರಲ್ಲಿ NDA ಸರ್ಕಾರ ತಂದಿರುವುದೂ ಸಹ ಸಂಸತ್ ಕಾಯ್ದೆಯೇ ಆಗಿದೆ. ಯುಪಿಎಗಿಂತ ಹೆಚ್ಚು ಪಾರದರ್ಶಕವಾಗಿದೆ ಎಂದರು.
ಸಂಸತ್ ಮತ್ತು ರಾಷ್ಟ್ರಪತಿ ಅನುಮೋದಿಸಿದ ಕಾಯ್ದೆ: NDA ಸರ್ಕಾರ ವಕ್ಫ್ ಸಚಿವಾಲಯದಲ್ಲಿ ಸಹ ಹಲವು ಸಭೆ, ಸಮಾಲೋಚನೆ ನಡೆಸಿ, ಸದನದಲ್ಲಿ ಸುದೀರ್ಘ ಅವಧಿ ಚರ್ಚಿಸಿ ಮಂಡಿಸಿ ಅಂಗೀಕರಿಸಿದಂತಹ ತಿದ್ದುಪಡಿ ಕಾಯ್ದೆಯಾಗಿದೆ. ಮಾತ್ರವಲ್ಲ ರಾಷ್ಟ್ರಪತಿ ಅವರೂ ಸಹ ಅನುಮೋದಿಸಿ ಜಾರಿಗೊಳಿಸಿದಂತಹ ಕಾಯ್ದೆಯಾಗಿದೆ. ಹಾಗಾಗಿ ಹಿಂದಿನಂತೆ ಈಗಲೂ ಅನುಷ್ಠಾನಕ್ಕೆ ತರಲೇಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹಮದ್‌ಗೆ ತಿರುಗೇಟು ನೀಡಿದರು ಪ್ರಲ್ಹಾದ ಜೋಶಿ.
ವೋಟ್ ಬ್ಯಾಂಕ್‌ಗಾಗಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ: ವಕ್ಫ್ ತಿದ್ದುಪಡಿ ಮಸೂದೆ ಬಗ್ಗೆ ವೋಟ್ ಬ್ಯಾಂಕ್‌ಗಾಗಿ ಜನರ ದಿಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರೇನು ಮೂರ್ಖರಲ್ಲ ಪ್ರಜ್ಞಾವಂತರಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.