ಅಂಬೇಡ್ಕರ್ ಜಯಂತಿ: ಗಮನ ಸೆಳೆದ ಬೊಂಬೆಗಳು, ಸಂಸತ್ತಿನ ಸ್ತಬ್ಧಚಿತ್ರ

ಸಿಂದಗಿ: ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನ ಡೋಲು ವಾದ್ಯಗಳು, ಗೊಂಬೆಗಳು, ಕಲಾ ತಂಡಗಳು ವಿಶೇಷವಾಗಿದ್ದವು.
ಮೆರವಣಿಗೆಯಲ್ಲಿ ಸಂಸತ್ ರೂಪಕ ವಾಹನದಲ್ಲಿ ಡಾ.ಅಂಬೇಡ್ಕರ್ ಅವರ ಕುಳಿತ ಬಂಗಿಯ ಭಾವಚಿತ್ರವನ್ನು ಇಟ್ಟು ಅಲಂಕರಿಸಲಾಗಿತ್ತು. ನಾನಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಕಲಾವಿದರ ಡೊಳ್ಳು ಕುಣಿತ, ಯುವಕರ ನೃತ್ಯ, ಹಲಗಿ ನಾದ, ಧ್ವನಿವರ್ಧಕ ಮೆರವಣಿಗೆಯ ಕಳೆ ಹೆಚ್ಚಿಸಿತು. ನೀಲಿ ಧ್ವಜ, ಜಯಘೋಷ ಎಲ್ಲೆಡೆ ಮೊಳಗಿದವು.
ಸಂಜೆ 6ಗಂಟೆಯಿಂದ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತದಿಂದ ಪ್ರಾರಂಭಗೊಂಡು ಅಂಬಿಗರ ಚೌಡಯ್ಯ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವೇಶ್ವರ ವೃತ್ತದವರೆಗೆ ಭವ್ಯ ಮೆರವಣಿಗೆ ಜರುಗಿತು. ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು ಡಿ.ಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.