ಭಾರಿ ಗಾಳಿ, ಮಳೆ: ವಿದ್ಯುತ್ ಕಂಬಗಳಿಗೆ ಹಾನಿ

ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಇಂದು ಸಂಜೆ ಭರ್ಜರಿ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲು, ಗಾಳಿಯ ಅಬ್ಬರದೊಂದಿಗೆ ಮಳೆ ಸುರಿದಿದೆ. ಕೆಲವೆಡೆ ಸಾಮಾನ್ಯ ಮಳೆಯಾದರೆ ಕೆಲವೆಡೆ ಭರ್ಜರಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಎಲ್ಲೆಡೆ ಗುಡುಗು, ಸಿಡಿಲು ಹಾಗೂ ಭಾರೀ ಗಾಳಿಯ ಅಬ್ಬರವೂ ಜೋರಾಗಿತ್ತು. ಗಾಳಿಗೆ ಕೆಲವೆಡೆ ಮರ ಬಿದ್ದು, ರಸ್ತೆ ತಡೆ ಉಂಟಾಗಿದೆ, ವಿದ್ಯುತ್ ಕಂಬಗಳಿಗೆ ಹಾನಿ ಸಂಭವಿಸಿದೆ‌. ಗಡಿ ಗ್ರಾಮ ಕಲ್ಲಪಳ್ಳಿಯಲ್ಲಿ ಗಾಳಿಗೆ ಮನೆಗಳಿಗೆ ಹಾನಿ ಸಂಭವಿಸಿದೆ. ಬೀಸಿದ ಭಾರೀ ಗಾಳಿ ಮಳೆಗೆ ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಕಂಬಗಳಿಗೆ, ಲೈನ್‌ಗಳಿಗೆ ವ್ಯಾಪಕ ಹಾನಿ ಸಂಭವಿಸಿದೆ.
11 ಕೆವಿ ಲೈನ್‌ಗಳಲ್ಲಿ ಅಲ್ಲಲ್ಲಿ ಮರ ಬಿದ್ದು, ಗಾಳಿಗೆ ಕಂಬ ತುಂಡಾಗಿ ಹಾನಿ ಸಂಭವಿಸಿದೆ. ಇದರಿಂದ ವಿವಿಧ ಕಡೆಗಳಲ್ಲಿ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಸುಳ್ಯ ತಾಲೂಕಿನಲ್ಲಿ 20ಕ್ಕೂ ಹೆಚ್ಚು ಹೆಚ್‌ಟಿ ಕಂಬಗಳು ಹಾಗೂ 40 ಎಲ್‌ಟಿ ಕಂಬಗಳಿಗೆ ಹಾನಿ ಸಂಭವಿಸಿದೆ ಎಂದು ಮೆಸ್ಕಾಂ ಇಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.