ಮುಗಿಸುವ ಸ್ಕೆಚ್: ಯತ್ನಾಳ ಎಚ್ಚರಿಕೆ

ವಿಜಯಪುರ: ಪ್ರವಾದಿ ಮೊಹ್ಮದ್ ಪೈಗಂಬರ್ ಅವರ ಹೆಸರು ತೆಗೆದುಕೊಂಡಿಲ್ಲ, ಮಾತಿನ ಭರದಲ್ಲಿ ಮಾತಿನ ವೇಗದಲ್ಲಿ ಮೊಹ್ಮದ್ ಅಲಿ ಜಿನ್ನಾರಂತೆ ಉದ್ಧವ ಟಾಕ್ರೆ ವರ್ತಿಸುತ್ತಿದ್ದಾರೆ ಎಂದು ಹೇಳುತ್ತಿದ್ದೆ. ಅಲ್ಲಿ ಪೈಗಂಬರ್ ಅವರ ಹೆಸರು ಬಳಸಿಲ್ಲ ಎಂದು ಸ್ಪಷ್ಟಪಡಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇದೇ ವಿಷಯವಾಗಿ ನನ್ನನ್ನು ಮುಗಿಸಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದು ನಮ್ಮವರೇ ಕೆಲವರು ಸಪೋರ್ಟ್ ಮಾಡುತ್ತಾರೆ. ಇಡೀ ಹಿಂದೂ ಸಮಾಜ ನನ್ನ ಬೆನ್ನಿಗೆ ನಿಂತಿದೆ, ನನ್ನನ್ನು ಮುಗಿಸಲು ಸ್ಕೆಚ್ ಹಾಕಿದರೆ ಇಡೀ ಕರ್ನಾಟಕಕ್ಕೆ ಬೆಂಕಿ ಹತ್ತುತ್ತದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಧರ್ಮದ ದೇವರನ್ನು ಹೀಯಾಳಿಸುವುದು ಹಿಂದೂ ಸಂಸ್ಕೃತಿಯಲ್ಲ. ಹೀಗಾಗಿ ನಾನು ಧರ್ಮ ಸ್ಥಾಪಕರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮೊಹ್ಮದ್ ಅಲಿ ಜಿನ್ನಾ ಅವರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಹೇಳಲು ಹೊರಟಿದ್ದೆ, ಅಲ್ಲಿ ಮೊಹ್ಮದ್ ಎಂಬ ಶಬ್ದ ಅಷ್ಟೇ ಸೀಮಿತವಾಗಿದೆ ಹೊರತು ಪೈಗಂಬರ್ ಎಂದು ನಾನು ಹೇಳಿಲ್ಲ ಎಂದು ವಿವರಿಸಿದರು.