20ರಂದು ಕೂಡಲಸಂಗಮದಲ್ಲಿ ಆರೋಪಗಳಿಗೆ ಉತ್ತರ

ಬಾಗಲಕೋಟೆ: ಸಮಾಜದಲ್ಲಿ ಉಂಟಾಗಿರುವ ಗೊಂದಲ, 2ಎ ಮೀಸಲಾತಿ ಹೋರಾಟದ ರೂಪರೇಷಗಳ ಬಗ್ಗೆ ಚರ್ಚಿಸಲು ಏ. 20ರಂದು ಕೂಡಲಸಂಗಮದಲ್ಲಿ ರಾಜ್ಯಮಟ್ಟದ ಸಭೆ ನಡೆಸಲಾಗುತ್ತಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಭೆಗೆ ಪಕ್ಷಾತೀತವಾಗಿ ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು, ಇತರೆ ಕ್ಷೇತ್ರಗಳ ಜನಪ್ರತಿನಿಧಿಗಳನ್ನು ಒಳಗೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಆಹ್ವಾನಿಸುತ್ತಿದ್ದೇನೆ. ಭಕ್ತರ ಸಲಹೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇಲ್ಲಿ ಯಾರಿಗೂ ಪ್ರತ್ಯೇಕವಾಗಿ ಕರೆಯದೇ ಮಾಧ್ಯಮಗಳ ಮೂಲಕವೇ ಆಹ್ವಾನ ನೀಡುತ್ತೇವೆ. ಅಂದಿನ ಸಭೆಯಲ್ಲಿ ತಮ್ಮ ವಿರುದ್ಧದ ಎಲ್ಲ ಟೀಕೆ, ಟಿಪ್ಪಣಿಗಳಿಗೆ ಉತ್ತರ ಕೊಡುವುದಾಗಿ ತಿಳಿಸಿದರು.
ನಾನು ಯಾವುದೇ ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡಿಲ್ಲ. ಸಮಾಜದ ಪರವಾಗಿ ಹೋರಾಟ ಮಾಡಿದ್ದೇನೆ. ನಮ್ಮ ಸಮಾಜಕ್ಕೆ ಹಾಗೂ 2ಎ ಮೀಸಲಾತಿ ಹೋರಾಟಕ್ಕೆ ಯಾರೆಲ್ಲ ಶ್ರಮಿಸಿದ್ದಾರೋ ಅಂತವರಿಗೆ ಅನ್ಯಾಯವಾದಾಗ ಅವರ ಪರ ಧ್ವನಿ ಎತ್ತಿದ್ದೇನೆ ಎಂದು ಯತ್ನಾಳ್ ಪರವಾಗಿ ನಿಂತಿರುವ ತಮ್ಮ ನಿಲುವು ಸಮರ್ಥಿಸಿಕೊಂಡರು.